Skip to content
Opens in a new window
Listen to this chapter • 4:14

[1] ಪೆತುಯೇಲನ ಮಗನಾದ ಯೋಯೇಲನಿಗೆ ಬಂದ ಯೆಹೋವ ದೇವರು ವಾಕ್ಯವು:

[2] ಹಿರಿಯರೇ, ಇದನ್ನು ಕೇಳಿರಿ: ದೇಶದ ನಿವಾಸಿಗಳೇ, ಕಿವಿಗೊಡಿರಿ. ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ?

[3] ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ, ಅವರ ಮಕ್ಕಳೂ ಮತ್ತೊಂದು ತಲಾಂತರಕ್ಕೂ ತಿಳಿಸಲಿ.

[4] ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು ಗುಂಪುಮಿಡತೆ ತಿಂದುಬಿಟ್ಟಿತು. ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು, ಕುದುರೆಮಿಡತೆ ತಿಂದುಬಿಟ್ಟಿತು. ಕುದುರೆಮಿಡತೆ ಬಿಟ್ಟಿದ್ದನ್ನು ಕಂಬಳಿಮಿಡತೆ ತಿಂದುಬಿಟ್ಟಿತು.

[5] ಅಮಲೇರಿದವರೇ, ಎಚ್ಚೆತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾರಸದ ನಿಮಿತ್ತ ಗೋಳಾಡಿರಿ; ಏಕೆಂದರೆ, ಅದು ನಿಮ್ಮ ಬಾಯಿಗೆ ಇನ್ನು ದೊರಕುವುದಿಲ್ಲ.

[6] ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು. ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ; ಅದರ ಕೋರೆಗಳು ಸಿಂಹದ ಹಲ್ಲುಗಳು, ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ.

[7] ಅದು ನನ್ನ ದ್ರಾಕ್ಷಿಬಳ್ಳಿಯನ್ನು ಹಾಳು ಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ. ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ. ಅದರ ಕೊಂಬೆಗಳು ಬಿಳುಪಾದವು.

[8] ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ, ಕನ್ಯೆಯ ಹಾಗೆ ಪ್ರಲಾಪಿಸು.

[9] ಧಾನ್ಯ ಸಮರ್ಪಣೆಯನ್ನಾಗಲಿ ಪಾನಾರ್ಪಣೆಯನ್ನಾಗಲಿ ಯೆಹೋವ ದೇವರ ಆಲಯದಲ್ಲಿ ಅರ್ಪಿಸುವುದಿಲ್ಲ. ಯೆಹೋವ ದೇವರ ಸೇವಕರಾದ ಯಾಜಕರು ಗೋಳಾಡುತ್ತಾರೆ.

[10] ಹೊಲವು ಹಾಳಾಗಿದೆ; ಭೂಮಿಯು ಒಣಗಿದೆ, ಧಾನ್ಯವು ನಾಶವಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ತೀರಿಹೋಗಿದೆ.

[11] ರೈತರೇ, ರೋದಿಸಿರಿ, ತೋಟಗಾರರೇ, ಪರಿತಪಿಸಿರಿ; ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; ಏಕೆಂದರೆ ಹೊಲದ ಬೆಳೆ ನಾಶವಾಗಿದೆ.

[12] ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿ ಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.

[13] ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ. ಬಲಿಪೀಠದ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ. ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ.

[14] ಪವಿತ್ರ ಉಪವಾಸವನ್ನು ಘೋಷಿಸಿರಿ. ಪವಿತ್ರ ಸಭೆಯನ್ನು ಕರೆಯಿರಿ. ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ, ಯೆಹೋವ ದೇವರಿಗೆ ಮೊರೆಯಿಡಿರಿ.

[15] ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.

[16] ನಮ್ಮ ಕಣ್ಣೆದುರೇ ಆಹಾರವು ಹಾಳಾಯಿತಲ್ಲಾ. ಸಂತೋಷವೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತಲ್ಲವೇ?

[17] ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ. ಉಗ್ರಾಣಗಳು ನಾಶವಾಗಿವೆ. ಕಣಜಗಳು ಕುಸಿದುಬಿದ್ದಿವೆ. ಏಕೆಂದರೆ ಧಾನ್ಯವು ಒಣಗಿದೆ.

[18] ಪಶುಗಳು ನರಳುತ್ತವೆ. ದನದ ಹಿಂಡುಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ; ಕುರಿಮಂದೆಗಳು ಸಹ ಕಷ್ಟಪಡುತ್ತಲಿವೆ.

[19] ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ.

[20] ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿ ಹೋಗಿವೆ. ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.

ಯೋಯೇಲ — Chapters