[1] ಮೂರನೆಯ ದಿವಸದಲ್ಲಿ, ಎಸ್ತೇರಳು ರಾಜವಸ್ತ್ರ ಆಭರಣಗಳನ್ನು ಧರಿಸಿಕೊಂಡು ಅರಮನೆಗೆ ಎದುರಾಗಿರುವ ಅರಸನ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ನಿಂತಳು. ಅರಸನು ರಾಜಮಂದಿರದೊಳಗೆ ತನ್ನ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು.
[2] ಅರಸನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ, ಆಕೆಗೆ ತನ್ನ ಮೆಚ್ಚುಗೆಯನ್ನು ತೋರಿ ತನ್ನ ಕೈಯಲ್ಲಿದ್ದ ಸ್ವರ್ಣದಂಡವನ್ನು ಎಸ್ತೇರಳ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಬಂದು ರಾಜದಂಡದ ತುದಿಯನ್ನು ಮುಟ್ಟಿದಳು.
[3] ಆಗ ಅರಸನು ಅವಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
[4] ಅದಕ್ಕೆ ಎಸ್ತೇರಳು ಅರಸನಿಗೆ, “ಸಮ್ಮತಿಯಾದರೆ ನಾನು ಅರಸನಿಗಾಗಿ ಸಿದ್ಧಮಾಡಿಸಿರುವ ಔತಣಕ್ಕೆ ಅರಸನೂ ಹಾಮಾನನೂ ಈ ಹೊತ್ತು ಬರಬೇಕು,” ಎಂದಳು.
[5] ಆಗ ಅರಸನು, “ಎಸ್ತೇರಳು ಹೇಳಿದ ಪ್ರಕಾರ ನಾವು ಮಾಡಲು, ಬೇಗನೆ ಹಾಮಾನನನ್ನು ಕರೆದುಕೊಂಡು ಬನ್ನಿರಿ,” ಎಂದು ಆಜ್ಞಾಪಿಸಿದನು. ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಅರಸನೂ ಹಾಮಾನನೂ ಬಂದರು.
[6] ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಈಗ ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
[7] ಅದಕ್ಕೆ ಎಸ್ತೇರಳು, “ನನ್ನ ಬೇಡಿಕೆಯೂ ನನ್ನ ವಿಜ್ಞಾಪನೆಯೂ ಇದೇ:
[8] ಅರಸನಿಗೆ ಸಮ್ಮತಿಯಾದರೆ, ಅರಸನಿಗೂ ಹಾಮಾನನಿಗೂ ನಾನು ಮಾಡಲಿರುವ ಔತಣಕ್ಕೆ ನಾಳೆಯೂ ಬರಬೇಕು. ಆಗ ಅರಸನ ಪ್ರಶ್ನೆಗೆ ಉತ್ತರಕೊಡುವೆನು,” ಎಂದಳು.
[9] ಆ ದಿನದಲ್ಲಿ ಹಾಮಾನನು ಹರ್ಷಭರಿತನಾಗಿ ಹೊರಟುಹೋದನು. ಆದರೆ ಅರಮನೆಯ ಹೆಬ್ಬಾಗಿಲಲ್ಲಿರುವ ಮೊರ್ದೆಕೈ ತನಗೆ ಭಯಪಡದೆ ಕುಳಿತುಕೊಂಡೇ ಇರುವುದನ್ನು ಹಾಮಾನನು ಕಂಡು ಮೊರ್ದೆಕೈಯ ಮೇಲೆ ಕೋಪಗೊಂಡನು.
[10] ಆದರೂ ಹಾಮಾನನು ಬಿಗಿಹಿಡಿದುಕೊಂಡು ತನ್ನ ಮನೆಗೆ ಹೋದನು. ಅವನು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಯಿಸಿದನು.
[11] ಹಾಮಾನನು ತನ್ನ ಐಶ್ವರ್ಯದ ಘನವನ್ನೂ, ತನ್ನ ಮಕ್ಕಳ ಹೆಚ್ಚಳವನ್ನೂ, ಅರಸನು ತನ್ನನ್ನು ಹೆಚ್ಚಿಸಿದ್ದನ್ನೂ, ಅರಸನ ಪ್ರಭುಗಳ ಹಾಗೂ ಸೇವಕರ ಮೇಲೆ ಎತ್ತಿದ್ದನ್ನೂ ಹೀಗೆ ಎಲ್ಲವನ್ನೂ ಅವರಿಗೆ ವಿವರವಾಗಿ ಹೇಳಿದನು.
[12] ಇದಲ್ಲದೆ ಹಾಮಾನನು, “ಎಸ್ತೇರ್ ರಾಣಿಯು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೆ ಯಾರನ್ನು ಕರೆಯಲಿಲ್ಲ. ಮರುದಿನವೂ ಅರಸನೊಂದಿಗೆ ಔತಣಮಾಡಲು ನನ್ನನ್ನು ಆಹ್ವಾನಿಸಿದ್ದಾಳೆ.
[13] ಆದರೆ ಯೆಹೂದ್ಯನಾದ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ನನ್ನ ಕಣ್ಣೆದುರು ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಎಂದನು.
[14] ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಬೆಳಿಗ್ಗೆ ಗಲ್ಲಿಗೇರಿಸಲು ಇಪ್ಪತ್ತು ಮೀಟರ್ ಉದ್ದದ ಒಂದು ಗಲ್ಲುಮರವನ್ನು ಮಾಡು. ತರುವಾಯ ಅರಸನ ಸಂಗಡ ಔತಣಕ್ಕೆ ಹೋಗಿ ಸಂತೋಷವಾಗಿರು,” ಎಂದರು. ಈ ಸಲಹೆ ಹಾಮಾನನಿಗೆ ಮೆಚ್ಚಿಕೆಯಾದದ್ದರಿಂದ ಗಲ್ಲುಮರವನ್ನು ಸಿದ್ಧಮಾಡಿಸಿದನು.