[1] ಆದದ್ದೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಹಚ್ಚಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ಬಹು ದುಃಖದಿಂದ ಗೋಳಾಡಿದನು.
[2] ಅವನು ಅರಸನ ಅರಮನೆಯ ಬಾಗಿಲಿನವರೆಗೆ ಬಂದನು. ಏಕೆಂದರೆ ಗೋಣಿತಟ್ಟನ್ನು ಉಟ್ಟುಕೊಂಡು ಅರಸನ ಅರಮನೆಯ ಬಾಗಿಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ.
[3] ಇದಲ್ಲದೆ ಅರಸನ ಮಾತೂ ಅವನ ಕಟ್ಟಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡರು.
[4] ಆಗ ಎಸ್ತೇರಳ ದಾಸಿಯರೂ ಅವಳ ಕಂಚುಕಿಯರೂ ಬಂದು ಮೊರ್ದೆಕೈ ಬಗ್ಗೆ ಅವಳಿಗೆ ತಿಳಿಸಿದರು. ಆದ್ದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆಕೈಯು ಗೋಣಿತಟ್ಟನ್ನು ತೆಗೆದುಹಾಕಿ, ವಸ್ತ್ರಗಳನ್ನು ಧರಿಸಿಕೊಳ್ಳುವಂತೆ ಉಡುಪನ್ನು ಕಳುಹಿಸಿಕೊಟ್ಟಳು. ಆದರೆ ಅವನು ಅದನ್ನು ತೆಗೆದುಕೊಳ್ಳಲಿಲ್ಲ.
[5] ಆಗ ಎಸ್ತೇರಳು ತನ್ನ ಬಳಿಯಲ್ಲಿ ಸೇವೆಗಾಗಿ ನೇಮಿಸಲಾಗಿದ್ದ ಅರಸನ ರಾಜಕಂಚುಕಿಯರಲ್ಲಿ ಹತಾಕನನ್ನು ಕರೆದು, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ವರ್ತನೆಗೆ ಕಾರಣವನ್ನೂ ಅವನಿಂದ ತಿಳಿದುಕೊಂಡು ಬರಬೇಕೆಂದು ಆಜ್ಞಾಪಿಸಿದಳು.
[6] ಹಾಗೆಯೇ ಹತಾಕನು ಅರಸನ ಅರಮನೆಯ ಬಾಗಿಲ ಮುಂದೆ ಪಟ್ಟಣದ ಬೀದಿಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೋದನು.
[7] ಆಗ ಮೊರ್ದೆಕೈ ತನಗೆ ಆದ ಎಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣದ ವಿಷಯವನ್ನೂ ಅವನಿಗೆ ತಿಳಿಸಿದನು.
[8] ಯೆಹೂದ್ಯರನ್ನು ನಾಶಮಾಡಲು ಶೂಷನಿನಲ್ಲಿ ಪ್ರಕಟಗೊಂಡ ರಾಜಾಜ್ಞೆಯ ಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರಳಿಗೆ ತೋರಿಸಿ ವಿವರಿಸುವಂತೆಯೂ, ಅವಳು ತನ್ನ ಜನರಿಗಾಗಿ ಅರಸನ ಮುಂದೆ ಹೋಗಿ ಬಿನ್ನಹ ಮಾಡುವಂತೆಯೂ ಆಕೆಗೆ ತಿಳಿಸಲು ಹೇಳಿದನು.
[9] ಆಗ ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು.
[10] ಎಸ್ತೇರಳು ಮತ್ತೊಮ್ಮೆ ಹತಾಕನನ್ನು ಮೊರ್ದೆಕೈಯ ಬಳಿಗೆ ಕಳುಹಿಸಿ,
[11] “ಅರಸನು ಹೇಳಿಕಳುಹಿಸದೆ ಅರಸನ ಬಳಿಗೆ ಅರಮನೆಯ ಒಳಾಂಗಣಕ್ಕೆ ಹೋಗುವ ಗಂಡಸರಿಗಾಗಲಿ, ಹೆಂಗಸರಿಗಾಗಲಿ ಮರಣದಂಡನೆಯಾಗುವುದು. ಒಂದು ವೇಳೆ ಒಳಗೆ ಬಂದ ವ್ಯಕ್ತಿಯ ಕಡೆಗೆ ಅರಸನು ತನ್ನ ಸ್ವರ್ಣದಂಡವನ್ನು ಚಾಚಿದರೆ ಅವನಿಗೆ ಮಾತ್ರ ಮರಣದಂಡನೆಯಾಗದೆ ಜೀವದಿಂದ ಉಳಿಯುವರು. ಈ ರಾಜಾಜ್ಞೆಯನ್ನು ಅರಸನ ಸಮಸ್ತ ಸೇವಕರೂ ಅರಸನ ಪ್ರಾಂತಗಳ ಜನರೂ ತಿಳಿದಿದ್ದಾರೆ. ಆದರೆ ಕಳೆದ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ನನಗೆ ಆಮಂತ್ರಣವೇ ಬರಲಿಲ್ಲ,” ಎಂದು ತಿಳಿಸುವಂತೆ ಹೇಳಿದಳು.
[12] ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು.
[13] ಆಗ ಮೊರ್ದೆಕೈಯು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಅರಮನೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವೆಯೆಂದು ಭಾವಿಸಬೇಡ.
[14] ಏಕೆಂದರೆ ನೀನು ಈಗ ಮೌನವಾಗಿದ್ದು ಬಿಟ್ಟರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ಬಿಡುಗಡೆಯೂ ಉಂಟಾಗುವುವು. ಆದರೆ ನೀನೂ ನಿನ್ನ ತಂದೆಯ ಮನೆಯವರೂ ನಾಶವಾಗಿಹೋಗುವಿರಿ. ಇಂಥಾ ಕಾಲಕ್ಕೋಸ್ಕರ ನೀನು ಪಟ್ಟಕ್ಕೆ ಬಂದಿರಬಹುದು, ಯಾರಿಗೆ ಗೊತ್ತು?” ಎಂದು ಹೇಳಿ ಕಳುಹಿಸಿದನು.
[15] ಆಗ ಎಸ್ತೇರಳು ಮತ್ತೆ ಮೊರ್ದೆಕೈಗೆ,
[16] “ನೀನು ಹೋಗಿ ಶೂಷನಿನಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವು ರಾತ್ರಿ ಹಗಲೂ ಮೂರು ದಿನ ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸಮಾಡಿರಿ. ಹಾಗೆಯೇ ನಾನೂ ನನ್ನ ದಾಸಿಯರೊಡನೆ ಉಪವಾಸ ಮಾಡುವೆನು. ಅನಂತರ ನಾನು ರಾಜಾಜ್ಞೆಯನ್ನು ಮೀರಿ ಅರಸನ ಬಳಿಗೆ ಹೋಗುವೆನು. ನಾನು ಸತ್ತರೂ ಸಾಯುವೆನು,” ಎಂದು ಹೇಳಿಕಳುಸಿದಳು.
[17] ಆಗ ಮೊರ್ದೆಕೈ ಹೊರಟುಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.