Skip to content
Opens in a new window
Listen to this chapter • 4:16

[1] ಪ್ರಿಯ ಸ್ನೇಹಿತರೇ, ಅನೇಕ ಸುಳ್ಳು ಪ್ರವಾದಿಗಳು ಲೋಕದೊಳಗೆ ಹೋಗಿರುವುದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.

[2] ನೀವು ದೇವರಾತ್ಮನನ್ನು ಹೀಗೆ ಗುರುತಿಸಬಹುದು: ಕ್ರಿಸ್ತ ಯೇಸು ನರಮಾಂಸರಾಗಿ ಬಂದರೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದು.

[3] ನರಮಾಂಸದಲ್ಲಿ ಬಂದ ಯೇಸುವನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುವುದೆಂಬುದನ್ನು ನೀವು ಕೇಳಿದ್ದೀರಲ್ಲಾ. ಈಗಲೂ ಅದು ಲೋಕದಲ್ಲಿ ಇದೆ.

[4] ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರಾಗಿದ್ದೀರಿ, ಸುಳ್ಳು ಪ್ರವಾದಿಗಳನ್ನು ಜಯಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವ ದೇವರು ಲೋಕದಲ್ಲಿ ಇರುವವನಿಗಿಂತ ದೊಡ್ಡವರಾಗಿದ್ದಾರೆ.

[5] ಅವರು ಲೋಕಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಅವರು ಲೋಕ ಸಂಬಂಧವಾಗಿ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ.

[6] ನಾವಂತೂ ದೇವರಿಗೆ ಸೇರಿದವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸೇರದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದು ಸತ್ಯದ ಆತ್ಮ. ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದುಕೊಳ್ಳುತ್ತೇವೆ.

[7] ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬರು ದೇವರಿಂದ ಹುಟ್ಟಿದವರೂ ದೇವರನ್ನು ಬಲ್ಲವರೂ ಆಗಿದ್ದಾರೆ.

[8] ಪ್ರೀತಿಯಿಲ್ಲದವರು ದೇವರನ್ನು ಬಲ್ಲವರಲ್ಲ. ಏಕೆಂದರೆ ದೇವರು ಪ್ರೀತಿಯಾಗಿದ್ದಾರೆ.

[9] ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮೂಲಕ ನಾವು ಜೀವಿಸುವುದಕ್ಕಾಗಿ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ಇದರಿಂದಲೇ ದೇವರು ತಮ್ಮ ಪ್ರೀತಿಯನ್ನು ನಮ್ಮ ನಡುವೆ ತೋರಿಸಿದರು.

[10] ಪ್ರೀತಿಯು ಇದಾಗಿರುತ್ತದೆ: ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ದೇವರೇ ನಮ್ಮನ್ನು ಪ್ರೀತಿಸಿ, ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಬಲಿಯಾಗಿ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕಳುಹಿಸಿ ಕೊಟ್ಟಿದ್ದರಲ್ಲಿಯೇ ಅವರ ಸತ್ಯ ಪ್ರೀತಿಯು ತೋರಿಬರುತ್ತದೆ.

[11] ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.

[12] ದೇವರನ್ನು ಯಾರೂ ಎಂದೂ ನೋಡಿಲ್ಲ, ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಗೊಂಡಿದ್ದಾರೆ ಮತ್ತು ಅವರ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.

[13] ದೇವರು ನಮಗೆ ತಮ್ಮ ಆತ್ಮವನ್ನು ಕೊಟ್ಟಿರುವುದರಿಂದಲೇ, ನಾವು ದೇವರಲ್ಲಿಯೂ ದೇವರು ನಮ್ಮಲ್ಲಿಯೂ ಬಾಳುವವರಾಗಿದ್ದಾರೆಂದು ತಿಳಿದುಕೊಳ್ಳುತ್ತೇವೆ.

[14] ತಂದೆಯು ಮಗನನ್ನು ಲೋಕ ರಕ್ಷಕರನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ನೋಡಿದ್ದೇವೆ ಮತ್ತು ಅದಕ್ಕೆ ನಾವು ಸಾಕ್ಷಿ ಹೇಳುತ್ತೇವೆ.

[15] ಯೇಸು ದೇವರ ಪುತ್ರರಾಗಿದ್ದಾರೆಂದು ಯಾರು ಒಪ್ಪಿಕೊಳ್ಳುತ್ತಾರೋ, ಅವರಲ್ಲಿ ದೇವರು ಬಾಳುತ್ತಾರೆ ಮತ್ತು ಅವರು ದೇವರಲ್ಲಿ ಬಾಳುವವರಾಗಿದ್ದಾರೆ.

[16] ದೇವರು ನಮ್ಮನ್ನು ಪ್ರೀತಿಸುತ್ತಾರೆಂದು ನಾವು ತಿಳಿದುಕೊಂಡಿದ್ದೇವೆ ಮತ್ತು ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾರೆ, ಪ್ರೀತಿಯಲ್ಲಿ ಬಾಳುವವರು ದೇವರಲ್ಲಿ ಬಾಳುವವರಾಗಿದ್ದಾರೆ, ದೇವರು ಅವರಲ್ಲಿ ಬಾಳುವವರಾಗಿದ್ದಾರೆ.

[17] ನ್ಯಾಯತೀರ್ಪಿನ ದಿನದಲ್ಲಿ ನಮಗೆ ಧೈರ್ಯವಿರುವಂತೆ ನಮ್ಮ ಪ್ರೀತಿಯು ಸಿದ್ಧಿಗೆ ಬಂತು. ಏಕೆಂದರೆ ಯೇಸು ಎಂಥವರಾಗಿದ್ದಾರೋ ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ.

[18] ಪ್ರೀತಿಯಲ್ಲಿ ಹೆದರಿಕೆಯಿಲ್ಲ ಆದರೆ ಪೂರ್ಣ ಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಏಕೆಂದರೆ ಭಯವಿರುವಲ್ಲಿ ಯಾತನೆಯಿರುವುದು. ಭಯಪಡುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.

[19] ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ದೇವರನ್ನು ಪ್ರೀತಿಸುತ್ತೇವೆ.

[20] ಒಬ್ಬನು, “ನಾನು ದೇವರನ್ನು ಪ್ರೀತಿಸುತ್ತೇನೆ,” ಎಂದು ಹೇಳಿ ತನ್ನ ಸಹೋದರರನ್ನು ದ್ವೇಷ ಮಾಡಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು, ಕಾಣದಿರುವ ದೇವರನ್ನು ಪ್ರೀತಿಸಲಾರನು.

[21] ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಸಹೋದರಿಯನ್ನೂ ಪ್ರೀತಿಸಬೇಕೆಂಬ ಈ ಆಜ್ಞೆಯನ್ನು ನಾವು ದೇವರಿಂದ ಹೊಂದಿದ್ದೇವೆ.

1 ಯೋಹಾನನು — Chapters