[1] ನನ್ನ ಪ್ರಿಯ ಮಕ್ಕಳೇ, ನೀವು ಪಾಪಮಾಡದಂತೆ ಇವುಗಳನ್ನು ನಾನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತರಾದ ಕ್ರಿಸ್ತ ಯೇಸುವು ನಮ್ಮ ಪರವಾಗಿ ವಾದಿಸುವ ವಕೀಲರಾಗಿದ್ದಾರೆ.
[2] ಕ್ರಿಸ್ತ ಯೇಸು ನಮ್ಮ ಪಾಪಗಳನ್ನು ಪರಿಹರಿಸುವ ಬಲಿಯಾಗಿದ್ದಾರೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನೂ ಪರಿಹರಿಸುತ್ತಾರೆ.
[3] ನಾವು ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದರಿಂದಲೇ ದೇವರನ್ನು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ.
[4] ಒಬ್ಬನು, “ನಾನು ಅವರನ್ನು ಬಲ್ಲೆನು,” ಎಂದು ಹೇಳಿ ಅವರ ಆಜ್ಞೆಗಳನ್ನು ಕೈಗೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವು ಅವನಲ್ಲಿ ಇಲ್ಲ.
[5] ಯಾವನಾದರೂ ದೇವರ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ನಾವು ದೇವರಲ್ಲಿದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
[6] ದೇವರಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಯೇಸು ಜೀವಿಸಿದಂತೆಯೇ ತಾನೂ ಜೀವಿಸಬೇಕು.
[7] ಪ್ರಿಯರೇ, ನಾನು ನಿಮಗೆ ಬರೆಯುವುದು ಹೊಸ ಅಪ್ಪಣೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ. ಈ ಹಳೆಯ ಅಪ್ಪಣೆಯು ಮೊದಲಿನಿಂದಲೂ ನೀವು ಕೇಳಿದ ವಾಕ್ಯವೇ.
[8] ತಿರುಗಿ ನಾನು ನಿಮಗೆ ಬರೆಯುವುದು ಹೊಸ ಅಪ್ಪಣೆಯೇ. ಇದು ಕ್ರಿಸ್ತ ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ. ಏಕೆಂದರೆ ಕತ್ತಲೆಯು ಕಳೆದುಹೋಗುತ್ತದೆ. ಸತ್ಯವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ.
[9] ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ.
[10] ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಅವನಲ್ಲಿ ಆತಂಕವುಳ್ಳದ್ದು ಯಾವುದೂ ಇಲ್ಲ.
[11] ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ಜೀವಿಸುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡು ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಎಂದು ಅವನಿಗೆ ತಿಳಿಯದು.
[12] ಪ್ರಿಯ ಮಕ್ಕಳೇ, ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ.
[13] ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ. ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವುದರಿಂದ ನಿಮಗೆ ಬರೆಯುತ್ತೇನೆ.
[14] ಮಕ್ಕಳೇ, ನೀವು ತಂದೆಯನ್ನು ತಿಳಿದುಕೊಂಡಿರುವುದರಿಂದ ನಿಮಗೆ ಬರೆಯುತ್ತೇನೆ. ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು ಬಲ ಹೊಂದಿರುವುದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದಲೂ ನೀವು ಕೆಡುಕನನ್ನು ಜಯಿಸಿರುವುದರಿಂದಲೂ ನಿಮಗೆ ಬರೆದಿದ್ದೇನೆ.
[15] ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.
[16] ಏಕೆಂದರೆ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಯಿಂದ ಬಂದವುಗಳಲ್ಲ, ಲೋಕದಿಂದ ಬಂದವುಗಳಾಗಿವೆ.
[17] ಲೋಕವೂ ಲೋಕದ ಆಶೆಗಳೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಜೀವಿಸುವನು.
[18] ಪ್ರಿಯ ಮಕ್ಕಳೇ, ಇದು ಅಂತ್ಯ ಕಾಲವಾಗಿದೆ. ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತವಿರೋಧಿಗಳಿದ್ದಾರೆ. ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ.
[19] ಅವರು ನಮ್ಮಿಂದ ಹೊರಟು ಹೋದರು. ಆದರೆ ಅವರು ನಮ್ಮವರಾಗಿರಲಿಲ್ಲ. ಏಕೆಂದರೆ ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ತೋರಿಬಂತು.
[20] ಆದರೆ ನೀವು ಪವಿತ್ರವಾದವರಿಂದ ಅಭಿಷೇಕವನ್ನು ಹೊಂದಿದವರಾಗಿದ್ದು ನೀವೆಲ್ಲರೂ ಸತ್ಯವನ್ನು ತಿಳಿದವರಾಗಿದ್ದೀರಿ.
[21] ನೀವು ಸತ್ಯವನ್ನು ತಿಳಿಯದವರೆಂದು ನಾನು ಭಾವಿಸುತ್ತಿಲ್ಲ, ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಬರುವುದಿಲ್ಲ ಎಂಬುವುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.
[22] ಸುಳ್ಳುಗಾರನು ಯಾರು? ಮನುಷ್ಯನಾಗಿ ಬಂದ ಯೇಸುವು ಕ್ರಿಸ್ತ ಅಲ್ಲ ಎಂದು ಯಾವನು ಅಲ್ಲಗಳೆಯುತ್ತಾನೋ ಅವನೇ ಸುಳ್ಳುಗಾರನು. ಅವನೇ ತಂದೆಯನ್ನೂ ಮಗನನ್ನೂ ಅಲ್ಲಗಳೆಯುವ ಕ್ರಿಸ್ತವಿರೋಧಿಯಾಗಿದ್ದಾನೆ.
[23] ಮಗನನ್ನು ಅಲ್ಲಗಳೆಯುವವನು ತಂದೆಯನ್ನೂ ಅಲ್ಲಗಳೆಯುತ್ತಾನೆ. ಮಗನನ್ನು ಅಂಗೀಕರಿಸುವವನು ತಂದೆಯನ್ನೂ ಅಂಗೀಕರಿಸುತ್ತಾನೆ.
[24] ನೀವಂತೂ ಯಾವುದನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಹಾಗಿದ್ದರೆ, ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿರುತ್ತೀರಿ.
[25] ಇದೇ ಕ್ರಿಸ್ತ ಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವವಾಗಿರುತ್ತದೆ.
[26] ನಿಮ್ಮನ್ನು ವಂಚಿಸುವವರ ವಿಷಯವಾಗಿ ಇವುಗಳನ್ನು ನಾನು ನಿಮಗೆ ಬರೆದಿದ್ದೇನೆ.
[27] ಆದರೆ ಕ್ರಿಸ್ತ ಯೇಸುವಿನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುತ್ತದೆ. ಆದುದರಿಂದ ಬೇರೆ ಯಾರೂ ನಿಮಗೆ ಬೋಧಿಸುವ ಅವಶ್ಯವಿಲ್ಲ. ಆ ಅಭಿಷೇಕವೇ ಎಲ್ಲಾ ವಿಷಯಗಳಲ್ಲಿ ನಿಮಗೆ ಬೋಧಿಸುವುದು. ಆ ಬೋಧನೆಯು ಸುಳ್ಳಲ್ಲ, ಸತ್ಯವಾದದ್ದು. ಆದ್ದರಿಂದ ಅದು ನಿಮಗೆ ಬೋಧಿಸಿದ ಪ್ರಕಾರವೇ, ಕ್ರಿಸ್ತ ಯೇಸುವಿನಲ್ಲಿ ನೀವು ನೆಲೆಗೊಳ್ಳಿರಿ.
[28] ಪ್ರಿಯ ಮಕ್ಕಳೇ, ಕ್ರಿಸ್ತ ಯೇಸು ಪ್ರತ್ಯಕ್ಷವಾಗುವಾಗ ನೀವು ಅವರ ಆಗಮನದಲ್ಲಿ ಅವರ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಳ್ಳಿರಿ.
[29] ದೇವರು ನೀತಿವಂತರಾಗಿದ್ದಾರೆಂಬುದು ನಿಮಗೆ ಗೊತ್ತಾಗಿದ್ದರೆ, ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನೂ ಅವರಿಂದ ಹುಟ್ಟಿದವನೆಂದು ನೀವು ತಿಳಿದಿರಬೇಕು.