Skip to content
Opens in a new window
Listen to this chapter • 6:12

[1] ನಿಮ್ಮಲ್ಲಿ ಕ್ರಿಸ್ತನಿಂದಾದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಇವೆಯೋ?

[2] ನಿಮ್ಮಲ್ಲಿ ಇವುಗಳು ಇರುವುದಾದರೆ, ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ. ಆಗ ನನ್ನ ಸಂತೋಷವು ಪರಿಪೂರ್ಣವಾಗುವುದು. ಒಬ್ಬರಿಗೊಬ್ಬರು ಒಂದೇ ಪ್ರೀತಿ ಉಳ್ಳವರಾಗಿರಿ. ಅನ್ಯೋನ್ಯಭಾವವುಳ್ಳವರಾಗಿದ್ದು ಒಂದೇ ಗುರಿಯಿಂದ ಜೀವಿಸಿರಿ.

[3] ನೀವು ಯಾವುದನ್ನೇ ಮಾಡುವಾಗ, ಸ್ವಾರ್ಥವಾಗಲಿ ಅಹಂಕಾರವಾಗಲಿ ನಿಮಗೆ ಮಾರ್ಗದರ್ಶಕವಾಗದಂತೆ ನೋಡಿಕೊಳ್ಳಿರಿ. ದೀನಭಾವವುಳ್ಳವರಾಗಿದ್ದು ನಿಮಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಗೌರವವನ್ನು ಕೊಡಿರಿ.

[4] ನಿಮ್ಮ ಅಭಿಲಾಷೆಗಳ ಬಗ್ಗೆ ಮಾತ್ರ ಚಿಂತಿಸದೆ ಇತರರ ಜೀವಿತದ ಬಗ್ಗೆಯೂ ಚಿಂತಿಸಿರಿ.

[5] ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

[6] ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮನಾಗಿದ್ದರೂ ಆ ಪದವಿಯನ್ನು ಬಿಡಲಾರೆ ಎನ್ನಲಿಲ್ಲ.

[7] ಆ ಪದವಿಯನ್ನು ಆತನು ಬಿಟ್ಟುಕೊಟ್ಟು ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.

[8] ಆತನು ಮನುಷ್ಯನಾಗಿ ಜೀವಿಸುತ್ತಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನೂ ಕಡೆಗಣಿಸಿ ದೇವರಿಗೆ ಸಂಪೂರ್ಣ ವಿಧೇಯನಾಗಿ, ಶಿಲುಬೆಯ ಮೇಲೆ ಪ್ರಾಣವನ್ನೇ ಕೊಟ್ಟನು.

[9] ಆದ್ದರಿಂದ ದೇವರು ಆತನನ್ನು ಅತ್ಯುನ್ನತವಾದ ಸ್ಥಾನಕ್ಕೇರಿಸಿ ಉಳಿದೆಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.

[10] ಆದ್ದರಿಂದ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಪಾತಾಳದಲ್ಲಿಯೂ ಇರುವ ಪ್ರತಿಯೊಬ್ಬರು ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು,

[11] “ಯೇಸು ಕ್ರಿಸ್ತನೇ ಪ್ರಭು”ವೆಂದು ಹೇಳುವರು. ಇದರಿಂದ ತಂದೆಯಾದ ದೇವರಿಗೆ ಮಹಿಮೆ ಉಂಟಾಗುವುದು.

[12] ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.

[13] ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.

[14] ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ.

[15] ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ.

[16] ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.

[17] ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ.

[18] ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.

[19] ನಿಮ್ಮ ಬಳಿಗೆ ತಿಮೊಥೆಯನನ್ನು ಆದಷ್ಟು ಬೇಗನೆ ಕಳುಹಿಸಿಕೊಡಲು ಪ್ರಭುವಾದ ಯೇಸುವಿನಲ್ಲಿ ನಿರೀಕ್ಷಿಸುತ್ತಿದ್ದೇನೆ. ಅವನ ಮೂಲಕ ನಿಮ್ಮ ಯೋಗಕ್ಷೇವುವನ್ನು ತಿಳಿದುಕೊಳ್ಳುವುದರಿಂದ ನನಗೆ ಪ್ರೋತ್ಸಾಹವಾಗಬಹುದು.

[20] ಅವನಂತೆ ನಿಮ್ಮ ವಿಷಯದಲ್ಲಿ ನಿಜವಾಗಿಯೂ ಚಿಂತಿಸುವವರು ನನ್ನ ಬಳಿ ಯಾರೂ ಇಲ್ಲ.

[21] ಉಳಿದವರು ಕೇವಲ ತಮ್ಮ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಸೇವೆಯ ಬಗ್ಗೆ ಚಿಂತಿಸುವುದಿಲ್ಲ.

[22] ತಿಮೊಥೆಯನು ಎಂಥವನೆಂಬುದು ನಿಮಗೆ ಗೊತ್ತಿದೆ. ಮಗನು ತನ್ನ ತಂದೆಯೊಡನೆ ಸೇವೆ ಮಾಡುವಂತೆ ಅವನು ಸುವಾರ್ತೆಯನ್ನು ತಿಳಿಸುವುದರಲ್ಲಿ ನನ್ನೊಂದಿಗೆ ಸೇವೆ ಮಾಡಿದನು.

[23] ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶವು ತಿಳಿದಕೂಡಲೇ ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ.

[24] ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಅದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.

[25] ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ.

[26] ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ.

[27] ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು.

[28] ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ.

[29] ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ.

[30] ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.

ಫಿಲಿಪ್ಪಿಯವರಿಗೆ ಬರೆದ ಪತ್ರ — Chapters