[1] ಸಭಾಹಿರಿಯನು, ತಾನು ಸತ್ಯವಾಗಿಯೂ ಪ್ರೀತಿಸುವ, ತನ್ನ ಪ್ರಿಯ ಸ್ನೇಹಿತನಾದ ಗಾಯನಿಗೆ ಬರೆಯುವ ಪತ್ರ.
[2] ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ.
[3] ಕ್ರಿಸ್ತನಲ್ಲಿ ಸಹೋದರರಾದ ಕೆಲವರು ಬಂದು, ನಿನ್ನ ಜೀವನದಲ್ಲಿರುವ ಸತ್ಯವನ್ನು ನನಗೆ ತಿಳಿಸಿದರು. ನೀನು ಸತ್ಯಮಾರ್ಗದಲ್ಲಿ ನಡೆಯುತ್ತಿರುವೆ ಎಂಬುದನ್ನು ಅವರು ನನಗೆ ಹೇಳಿದರು. ಇದು ನನಗೆ ಬಹಳ ಸಂತೋಷವನ್ನು ಉಂಟುಮಾಡಿತು.
[4] ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ.
[5] ನನ್ನ ಪ್ರಿಯ ಸ್ನೇಹಿತನೇ, ಕ್ರಿಸ್ತನಲ್ಲಿ ಸಹೋದರರಾದವರಿಗೆ ನೀನು ಸಹಾಯ ಮಾಡುತ್ತಿರುವುದು ಒಳ್ಳೆಯದೇ ಸರಿ. ನಿನಗೆ ಗೊತ್ತಿಲ್ಲದ ಸಹೋದರರಿಗೂ ನೀನು ಸಹಾಯ ಮಾಡುತ್ತಿರುವೆ!
[6] ನಿನಗಿರುವ ಪ್ರೀತಿಯನ್ನು ಕುರಿತು ಈ ಸಹೋದರರು ಸಭೆಗೆ ತಿಳಿಸಿದರು. ಅವರು ತಮ್ಮ ಪ್ರವಾಸವನ್ನು ಮುಂದುವರಿಸಲು ದಯವಿಟ್ಟು ಅವರಿಗೆ ಸಹಾಯಮಾಡು. ದೇವರಿಗೆ ಮೆಚ್ಚಿಗೆಕರವಾದ ರೀತಿಯಲ್ಲಿ ಅವರಿಗೆ ಸಹಾಯಮಾಡು.
[7] ಈ ಸಹೋದರರು ಕ್ರಿಸ್ತನ ಸೇವೆಗಾಗಿ ಪ್ರವಾಸಹೊರಟಿದ್ದಾರೆ. ಅವಿಶ್ವಾಸಿಗಳಿಂದ ಅವರು ಯಾವ ಸಹಾಯವನ್ನೂ ತೆಗೆದುಕೊಳ್ಳಲಿಲ್ಲ.
[8] ಆದ್ದರಿಂದ ನಾವು ಈ ಸಹೋದರರಿಗೆ ಸಹಾಯ ಮಾಡಬೇಕು. ನಾವು ಅವರಿಗೆ ಸಹಾಯಮಾಡಿದಾಗ, ಸತ್ಯಕ್ಕೋಸ್ಕರ ಅವರು ಮಾಡುವ ಕಾರ್ಯದಲ್ಲಿ ನಾವೂ ಪಾಲುಗಾರರಾಗುತ್ತೇವೆ.
[9] ನಾನು ಸಭೆಗೆ ಒಂದು ಪತ್ರವನ್ನು ಬರೆದೆನು. ಆದರೆ ನಾವು ಹೇಳಿದುದನ್ನು ದಿಯೊತ್ರೇಫನು ಕೇಳುವುದಿಲ್ಲ. ಅವನು ತಾನೇ ಅವರ ನಾಯಕನಾಗಿರಬೇಕೆಂದು ಯಾವಾಗಲೂ ಇಚ್ಛಿಸುತ್ತಾನೆ.
[10] ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.
[11] ನನ್ನ ಪ್ರಿಯ ಸ್ನೇಹಿತನೇ, ಕೆಟ್ಟದ್ದನ್ನು ಅನುಸರಿಸಬೇಡ; ಒಳ್ಳೆಯದನ್ನೇ ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ. ಆದರೆ ಕೆಟ್ಟದ್ದನ್ನು ಮಾಡುವವನು ದೇವರನ್ನು ಎಂದೂ ತಿಳಿಯದವನಾಗಿದ್ದಾನೆ.
[12] ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.
[13] ನಾನು ನಿನಗೆ ಹೇಳಲಿಚ್ಛಿಸುವ ಅನೇಕ ವಿಚಾರಗಳಿವೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲು ಇಚ್ಛಿಸುವುದಿಲ್ಲ.
[14] ನಾನು ನಿನ್ನನ್ನು ನೋಡಲು ಬರಬೇಕೆಂದಿದ್ದೇನೆ. ಆಗ ನಾವಿಬ್ಬರೂ ಒಟ್ಟಿಗೆ ಮಾತನಾಡಬಹುದು.
[15] ನಿನಗೆ ಶಾಂತಿಯಿರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಅಲ್ಲಿರುವ ಸ್ನೇಹಿತರಿಗೆಲ್ಲ ದಯವಿಟ್ಟು ನಮ್ಮ ವಂದನೆಯನ್ನು ತಿಳಿಸು.