[1] ಸಹೋದರ ಸಹೋದರಿಯರೇ, ನಮಗೋಸ್ಕರ ಪ್ರಾರ್ಥಿಸಿರಿ. ಪ್ರಭುವಿನ ಉಪದೇಶವು ತ್ವರಿತಗತಿಯಲ್ಲಿ ಹಬ್ಬಲೆಂದು ಪ್ರಾರ್ಥಿಸಿ. ನಿಮ್ಮಂತೆಯೇ ಇತರ ಜನರು ಈ ಉಪದೇಶವನ್ನು ಗೌರವಿಸುವಂತೆ ಪ್ರಾರ್ಥಿಸಿ.
[2] ಕೆಟ್ಟವರಾದ ಮತ್ತು ದುಷ್ಟರಾದ ಜನರ ಕೈಯಿಂದ ನಮ್ಮನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ. (ಪ್ರಭುವಿನಲ್ಲಿ ಜನರೆಲ್ಲರೂ ನಂಬಿಕೆಯಿಟ್ಟಿಲ್ಲ.)
[3] ಆದರೆ ಪ್ರಭುವು ನಂಬಿಗಸ್ತನು. ಆತನು ನಿಮ್ಮನ್ನು ಬಲಗೊಳಿಸುವನು ಮತ್ತು ಕೆಡುಕನಿಂದ (ಸೈತಾನನಿಂದ) ನಿಮ್ಮನ್ನು ರಕ್ಷಿಸುವನು.
[4] ನಾವು ನಿಮಗೆ ತಿಳಿಸಿದ ಸಂಗತಿಗಳನ್ನು ನೀವು ಮಾಡುತ್ತಿದ್ದೀರೆಂಬ ಭರವಸೆಯನ್ನು ಪ್ರಭುವೇ ನಮಗೆ ಕೊಟ್ಟಿದ್ದಾನೆ. ನೀವು ಇನ್ನು ಮುಂದೆಯೂ ಇವುಗಳನ್ನು ಮಾಡುವಿರೆಂದು ನಮಗೆ ತಿಳಿದದೆ.
[5] ದೇವರ ಪ್ರೀತಿಯ ಕಡೆಗೂ ಮತ್ತು ಕ್ರಿಸ್ತನ ತಾಳ್ಮೆಯ ಕಡೆಗೂ ನಿಮ್ಮ ಹೃದಯಗಳನ್ನು ಪ್ರಭುವೇ ಮುನ್ನಡೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
[6] ಸಹೋದರ ಸಹೋದರಿಯರೇ, ಕೆಲಸ ಮಾಡದ ವಿಶ್ವಾಸಿಯಿಂದ ನೀವು ದೂರವಿರಬೇಕೆಂದು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಧಿಕಾರದಿಂದ ನಿಮಗೆ ಆಜ್ಞಾಪಿಸುತ್ತಿದ್ದೇವೆ. ನಾವು ನೀಡಿದ ಉಪದೇಶವನ್ನು ಅವರು ಅನುಸರಿಸುವುದಿಲ್ಲ.
[7] ನಾವು ಜೀವಿಸುವಂತೆಯೇ ನೀವೂ ಜೀವಿಸಬೇಕೆಂದು ನಿಮಗೆ ಗೊತ್ತಿದೆ. ನಾವು ನಿಮ್ಮ ಜೊತೆಯಲ್ಲಿದ್ದಾಗ ಸೋಮಾರಿಗಳಾಗಿರಲಿಲ್ಲ;
[8] ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಯಾರಿಗೂ ತೊಂದರೆಯಾಗಬಾರದೆಂದು ಹಗಲಿರುಳು ಎಡೆಬಿಡದೆ ಕೆಲಸ ಮಾಡಿದೆವು.
[9] “ನಮಗೆ ಸಹಾಯ ಮಾಡಿ” ಎಂದು ನಿಮ್ಮನ್ನು ಕೇಳಲು ನಮಗೆ ಹಕ್ಕಿತ್ತು. ಆದರೆ ನಮ್ಮ ಪೋಷಣೆಗೆ ಬೇಕಾದದ್ದನ್ನು ನಾವೇ ದುಡಿದು ಸಂಪಾದಿಸಿದೆವು, ಏಕೆಂದರೆ ನಿಮಗೆ ನಾವು ಮಾದರಿಯಾಗಬೇಕೆಂದಿದ್ದೆವು.
[10] ನಾವು ನಿಮ್ಮ ಸಂಗಡವಿದ್ದಾಗ, “ಕೆಲಸ ಮಾಡದವನು ಊಟವನ್ನೂ ಮಾಡಕೂಡದು” ಎಂಬ ನಿಯಮವನ್ನು ವಿಧಿಸಿದೆವು.
[11] ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಜೀವನದಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಕೇಳಿದ್ದೇವೆ.
[12] ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುತ್ತಿದ್ದೇವೆ. ಅವರೇ ದುಡಿದು ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳಬೇಕೆಂದು ಆಜ್ಞಾಪಿಸಿ ಪ್ರಭುವಾದ ಯೇಸು ಕ್ರಿಸ್ತನಲ್ಲಿ ಬೇಡಿಕೊಳ್ಳುತ್ತೇವೆ.
[13] ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ.
[14] ಈ ಪತ್ರದ ಮೂಲಕ ನಿಮಗೆ ತಿಳಿಸಿರುವ ಮಾತುಗಳಿಗೆ ಯಾವನಾದರೂ ವಿಧೇಯನಾಗದಿದ್ದರೆ, ಅವನು ಯಾರೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಅವನ ಸಹವಾಸಮಾಡಬೇಡಿ. ಆಗ ಅವನಿಗೆ ನಾಚಿಕೆ ಆಗಬಹುದು.
[15] ಆದರೆ ಅವನನ್ನು ವೈರಿಯೆಂದು ಎಣಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿ ಹೇಳಿರಿ.
[16] ಶಾಂತಿದಾಯಕನಾದ ಪ್ರಭುವು ಎಲ್ಲಾ ಕಾಲಗಳಲ್ಲಿಯೂ ಮತ್ತು ಎಲ್ಲಾ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭುವು ನಿಮ್ಮೆಲ್ಲರೊಂದಿಗಿರಲಿ.
[17] ಪೌಲನಾದ ನಾನು ಈಗ ನನ್ನ ಕೈಬರಹದಿಂದ ಈ ಪತ್ರವನ್ನು ಮುಕ್ತಾಯಗೊಳಿಸುತ್ತೇನೆ. ನನ್ನ ಪತ್ರಗಳಿಗೆಲ್ಲಾ ಇದೇ ನನ್ನ ಗುರುತು. ಇದೇ ನನ್ನ ಕೈ ಬರಹ.
[18] ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.