Skip to content
Opens in a new window
Listen to this chapter • 5:49

[1] ವೃದ್ಧ ಪುರುಷರೊಂದಿಗೆ ಕೋಪದಿಂದ ಮಾತಾಡದೆ ಅವರನ್ನು ನಿನ್ನ ತಂದೆಯೆಂದು ಭಾವಿಸಿ ಅವರೊಂದಿಗೆ ಮಾತನಾಡು. ಯೌವನಸ್ಥರನ್ನು ಸಹೋದರರಂತೆಯೂ

[2] ವೃದ್ಧ ಸ್ತ್ರೀಯರನ್ನು ತಾಯಿಗಳಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸು. ಯಾವಾಗಲೂ ಅವರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊ.

[3] ದಿಕ್ಕಿಲ್ಲದ ವಿಧವೆಯರನ್ನು ಪರಿಪಾಲಿಸು.

[4] ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು.

[5] ಒಬ್ಬ ವಿಧವೆಯು ನಿಜವಾಗಿಯೂ ಸಹಾಯಕರಿಲ್ಲದೆ ಒಬ್ಬಂಟಿಗಳಾಗಿದ್ದರೆ, ಆಗ ಆಕೆಯು ತನ್ನ ರಕ್ಷಣೆಗಾಗಿ ದೇವರ ಮೇಲೆ ಭರವಸೆ ಇಡುವಳು. ಆ ಸ್ತ್ರೀಯು ಹಗಲು ರಾತ್ರಿಯೆಲ್ಲ ಪ್ರಾರ್ಥಿಸುವಳು. ಅವಳು ದೇವರ ಸಹಾಯವನ್ನು ಬೇಡುವಳು.

[6] ಆದರೆ ವಿಧವೆಯಾದವಳು ತನ್ನ ಇಚ್ಛೆಪೂರೈಕೆಗಾಗಿ ತನ್ನ ಜೀವಿತವನ್ನು ಬಳಸಿಕೊಳ್ಳುವುದಾದರೆ ಅವಳು ಬದುಕಿದ್ದರೂ ಸತ್ತಂತೆಯೇ.

[7] ಜನರು ನಿಂದೆನೆಗೆ ಗುರಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸು. ಆಗ ಯಾರೂ ಅವರನ್ನು ನಿಂದಿಸಲು ಸಾಧ್ಯವಿಲ್ಲ.

[8] ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ಸ್ವಂತ ಕುಟುಂಬದವರನ್ನು ಪರಿಪಾಲಿಸದೆ ಹೋದರೆ ಅವನು ಸತ್ಯಬೋಧನೆಯನ್ನು ತಿರಸ್ಕರಿಸುವವನಾಗಿದ್ದಾನೆ. ಅವನು ನಂಬದವನಿಗಿಂತ ತುಂಬಾ ಕೀಳಾದವನು.

[9] ವಿಧವೆಯರ ಪಟ್ಟಿಗೆ ಸೇರಿಸಲ್ಪಟ್ಟ ವಿಧವೆಯರು ವಯಸ್ಸಿನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದವಳೆಂದೂ

[10] ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದವಳೆಂದೂ ಹೆಸರನ್ನು ಪಡೆದಿರಬೇಕು. ಅಂದರೆ, ಅವಳು ತನ್ನ ಮಕ್ಕಳನ್ನು ಸಾಕಿಸಲಹಿದವಳೂ, ಅತಿಥಿಗಳನ್ನು ಸತ್ಕರಿಸಿದವಳೂ, ದೇವಜನರ ಪಾದಗಳನ್ನು ತೊಳೆದವಳೂ, ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಿದವಳೂ ಮತ್ತು ತನ್ನಿಂದಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದವಳೂ ಆಗಿರಬೇಕು.

[11] ಆದರೆ ಪ್ರಾಯದ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ಅವರು ಕ್ರಿಸ್ತನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೂ ದೈಹಿಕ ಬಯಕೆಗಳ ಒತ್ತಡದಿಂದ ಪದೇಪದೇ ಆತನಿಗೆ ವಿಮುಖರಾಗುತ್ತಾರೆ. ನಂತರ ಅವರು ಮತ್ತೆ ಮದುವೆಯಾಗಲು ಆಸಕ್ತರಾಗುತ್ತಾರೆ.

[12] ತಾವು ಕೊಟ್ಟ ವಾಗ್ದಾನವನ್ನು ಮೀರಿದವರೆಂಬ ತೀರ್ಪು ಅವರಿಗಾಗುತ್ತದೆ.

[13] ಇದಲ್ಲದೆ, ಅವರು ಮನೆಮನೆಗೆ ಅಲೆಯುತ್ತಾ ತಮ್ಮ ಕಾಲವನ್ನು ಕಳೆಯಲಾರಂಭಿಸುತ್ತಾರೆ; ಹರಟೆ ಮಾತುಗಳನ್ನಾಡುತ್ತಾ ಇತರರ ಜೀವನದಲ್ಲಿ ತಲೆಹಾಕಿ ಕಾಲಹರಣ ಮಾಡುತ್ತಾರೆ; ಹೇಳಬಾರದ ಸಂಗತಿಗಳನ್ನೆಲ್ಲ ಹೇಳುತ್ತಾರೆ.

[14] ಆದ್ದರಿಂದ ಅವರು ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆಯಲಿ ಮತ್ತು ತಮ್ಮ ಮನೆಗಳನ್ನು ನೋಡಿಕೊಳ್ಳಲಿ. ಆಗ ಅವರನ್ನು ಟೀಕಿಸಲು ನಮ್ಮ ಶತ್ರುವಿಗೆ ಯಾವ ಕಾರಣವೂ ಇರುವುದಿಲ್ಲ.

[15] ಆದರೆ ಈಗಾಗಲೇ ಕೆಲವರು ತಮ್ಮ ದಾರಿಯನ್ನು ಬದಲಾಯಿಸಿ ಸೈತಾನನನ್ನು ಹಿಂಬಾಲಿಸಿದ್ದಾರೆ.

[16] ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಪರಿಪಾಲಿಸಲಿ. ಅವರನ್ನು ನೋಡಿಕೊಳ್ಳುವಂಥ ಜವಾಬ್ದಾರಿಯನ್ನು ಸಭೆಗೆ ಕೊಡಕೂಡದು. ಆಗ ದಿಕ್ಕಿಲ್ಲದ ವಿಧವೆಯರನ್ನು ನೋಡಿಕೊಳ್ಳಲು ಸಭೆಗೆ ಸಾಧ್ಯವಾಗುವುದು.

[17] ಸಭೆಯನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಹಿರಿಯರು ಗೌರವಕ್ಕೂ ಸಂಬಳಕ್ಕೂ ಯೋಗ್ಯರಾಗಿದ್ದಾರೆ. ಪ್ರಸಂಗ ಮಾಡುವುದರಲ್ಲಿಯೂ ಉಪದೇಶಮಾಡುವುದರಲ್ಲಿಯೂ ನಿರತರಾಗಿರುವ ಹಿರಿಯರು ಉನ್ನತವಾದ ಗೌರವವನ್ನು ಪಡೆಯುತ್ತಾರೆ.

[18] ಏಕೆಂದರೆ “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು” ಎಂಬುದಾಗಿಯೂ “ದುಡಿಯುವ ಆಳಿಗೆ ತಕ್ಕ ಕೂಲಿ ದೊರೆಯಬೇಕು” ಎಂಬುದಾಗಿಯೂ ಪವಿತ್ರ ಗ್ರಂಥವು ಹೇಳುತ್ತದೆ.

[19] ಸಭೆಯ ಹಿರಿಯರನ್ನು ಕುರಿತು ಯಾವನಾದರೂ ದೂರು ಹೇಳಿದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳಿಲ್ಲದ ಹೊರತು ಅವನ ಮಾತುಗಳಿಗೆ ಕಿವಿಗೊಡಬೇಡ.

[20] ಪಾಪ ಮಾಡುವ ಜನರನ್ನು ಸಭೆಯಲ್ಲಿ ಎಲ್ಲರ ಎದುರಿನಲ್ಲಿಯೇ ಗದರಿಸು. ಆಗ ಇತರರಿಗೂ ಎಚ್ಚರಿಕೆ ನೀಡಿದಂತಾಗುವುದು.

[21] ನೀನು ಈ ಕಾರ್ಯಗಳನ್ನು ಮಾಡಬೇಕೆಂದು ದೇವರ, ಯೇಸು ಕ್ರಿಸ್ತನ ಮತ್ತು ಆರಿಸಲ್ಪಟ್ಟ ದೇವದೂತರ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುತ್ತೇನೆ. ಆದರೆ ಸತ್ಯವನ್ನು ತಿಳಿಯುವುದಕ್ಕಿಂತ ಮೊದಲೇ ಜನರಿಗೆ ತೀರ್ಪು ನೀಡಬೇಡ. ಯಾರಿಗೂ ಪಕ್ಷಪಾತ ತೋರಬೇಡ.

[22] ನೀನು ನಿನ್ನ ಹಸ್ತಗಳನ್ನು ಯಾರ ಮೇಲಾದರೂ ಇಟ್ಟು ಅವನನ್ನು ಸಭಾಹಿರಿಯನನ್ನಾಗಿ ನೇಮಿಸುವುದಕ್ಕಿಂತ ಮೊದಲೇ ಗಮನವಿಟ್ಟು ಆಲೋಚನೆಮಾಡು. ಇತರ ಜನರ ಪಾಪಗಳಲ್ಲಿ ಪಾಲುಗಾರನಾಗದೆ ಶುದ್ಧನಾಗಿರು.

[23] ತಿಮೊಥೆಯನೇ, ನೀನು ನೀರನ್ನು ಮಾತ್ರ ಕುಡಿಯದೆ ಸ್ವಲ್ಪ ದ್ರಾಕ್ಷಾರಸವನ್ನು ಸಹ ಕುಡಿಯಬೇಕು. ಇದರಿಂದ ನಿನ್ನ ಜೀರ್ಣಶಕ್ತಿಯು ಹೆಚ್ಚುವುದರಿಂದ ಪದೇಪದೇ ಅಸ್ವಸ್ಥನಾಗುವುದಿಲ್ಲ.

[24] ಕೆಲವು ಜನರ ಪಾಪಗಳು ಎದ್ದುಕಾಣುತ್ತವೆ. ಅವರಿಗೆ ನ್ಯಾಯತೀರ್ಪಾಗುವುದೆಂಬುದನ್ನು ಅವರ ಪಾಪಗಳೇ ತೋರ್ಪಡಿಸುತ್ತವೆ. ಆದರೆ ಇತರ ಕೆಲವು ಜನರ ಪಾಪಗಳು ಸ್ವಲ್ಪಕಾಲದ ನಂತರ ತಿಳಿದುಬರುತ್ತವೆ.

[25] ಹಾಗೆಯೇ, ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿವೆ. ಇನ್ನು ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿಲ್ಲದಿದ್ದರೂ ಅವು ಮರೆಯಾಗಿರಲು ಸಾಧ್ಯವಿಲ್ಲ.

ತಿಮೊಥೆಯನಿಗೆ ಬರೆದ ಮೊದಲನೆ ಪತ್ರ — Chapters