Skip to content
Opens in a new window
Listen to this chapter • 2:54

[1] ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ: ಅದನ್ನು ಕಿವಿಯಾರೆ ಕೇಳಿದೆವು; ಕಣ್ಣಾರೆ ನೋಡಿದೆವು, ಮನಸ್ಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು.

[2] ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು.

[3] ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು.

[4] ನಮ್ಮ ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.

[5] ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ.

[6] ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ.

[7] ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ.

[8] ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ.

[9] ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ.

[10] ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.

ಯೋಹಾನನು ಬರೆದ ಮೊದಲನೆ ಪತ್ರ — Chapters