Skip to content
Opens in a new window
Listen to this chapter • 4:39

[1] ಓಬದ್ಯನಿಗಾದ ದೈವದರ್ಶನ. ಕರ್ತನಾದ ಯೆಹೋವನು ಎದೋಮನ್ನು ಕುರಿತು ಹೀಗೆ ನುಡಿಯುತ್ತಾನೆ: ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇವೆ. ಆತನು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾನೆ, “ಹೊರಡಿರಿ! ಯುದ್ಧಕ್ಕೆ ಹೊರಟು ಎದೋಮಿನ ಮೇಲೆ ಬೀಳೋಣ”

[2] ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ. ನೀನು ಬಹಳವಾಗಿ ತಾತ್ಸಾರಕ್ಕೆ ಗುರಿಯಾಗಿರುವಿ.

[3] ಉನ್ನತ ಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ, ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು? ಎಂದುಕೊಳ್ಳುವ ಜನರೇ, ನಿಮ್ಮ ಹೃದಯದ ಒಣ ಹೆಮ್ಮೆಯು ನಿಮ್ಮನ್ನು ಮೋಸಗೊಳಿಸಿದೆ.

[4] ನೀನು ಹದ್ದಿನಂತೆ ಮೇಲಕ್ಕೆ ಏರಿದರೂ, ನಿನ್ನ ಗೂಡು ನಕ್ಷತ್ರ ಮಂಡಲದಲ್ಲಿ ನೆಲೆಗೊಂಡಿದ್ದರೂ, ಅಲ್ಲಿಂದ ನಿನ್ನನ್ನು ಇಳಿಸಿಬಿಡುವೆನು. ಇದು ಯೆಹೋವನ ನುಡಿ.

[5] ಕಳ್ಳರು ನಿನ್ನಲ್ಲಿ ನುಗ್ಗಿದರೆ, ರಾತ್ರಿ ವೇಳೆಯಲ್ಲಿ ಪಂಜುಗಳ್ಳರು ನಿನ್ನ ಮೇಲೆ ಬಿದ್ದರೆ, ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುವರಲ್ಲವೇ? ಆಹಾ! ನೀನು ಎಷ್ಟು ಭಂಗಪಟ್ಟಿದ್ದೀ! ದ್ರಾಕ್ಷಿಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ, ಹಕ್ಕಲನ್ನು ಉಳಿಸುವುದಿಲ್ಲವೋ?

[6] ಏಸಾವನ ಆಸ್ತಿಯು ಸಂಪೂರ್ಣ ನಾಶವಾಗಿ ಅದರ ನಿಧಿನಿಕ್ಷೇಪಗಳು ಸಂಪೂರ್ಣವಾಗಿ ಸೂರೆಯಾಗಿದ್ದು ಹೇಗೆ?

[7] ನಿನ್ನ ಮಿತ್ರ ಮಂಡಲಿಯವರೆಲ್ಲರೂ ನಿನ್ನನ್ನು ನಿನ್ನ ಮೇರೆಯ ಆಚೆಗೆ ತಳ್ಳಿಬಿಟ್ಟಿದ್ದಾರೆ, ನಿನ್ನ ಆಪ್ತರು ನಿನ್ನನ್ನು ವಂಚಿಸಿ ಸೋಲಿಸಿದ್ದಾರೆ. ನಿನ್ನ ಅನ್ನ ತಿಂದವರೇ ವಿವೇಕವಿಲ್ಲದೆ ನಿನಗೆ ಉರುಲೊಡ್ಡಿದ್ದಾರೆ.

[8] ಯೆಹೋವನು ಇಂತೆನ್ನುತ್ತಾನೆ. “ಆ ದಿನದಲ್ಲಿ ನಾನು ಎದೋಮಿನೊಳಗೆ ಜ್ಞಾನಿಗಳನ್ನು ಅಳಿಸದೇ ಬಿಡುವೆನೋ,” ಏಸಾವನ ಪರ್ವತದೊಳಗಿಂದ ವಿವೇಕವನ್ನು ಕಿತ್ತುಹಾಕದೇ ಇರುವೆನೇ?

[9] ತೇಮಾನ್ ಪಟ್ಟಣವೇ, ನಿನ್ನ ಶೂರರು ಧೈರ್ಯಗೆಟ್ಟು ಎಲ್ಲರೂ ಹತರಾಗಿ ಏಸಾವನ ಪರ್ವತದೊಳಗೆ ನಿರ್ಮೂಲರಾಗುವರು.

[10] ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿಮಿತ್ತ ಅವಮಾನವು ನಿನ್ನನ್ನು ಕವಿಯುವುದು. ನಿತ್ಯನಾಶನಕ್ಕೆ ಗುರಿಯಾಗುವಿ.

[11] ಅನ್ಯರು ನಿನ್ನ ತಮ್ಮನ ಆಸ್ತಿಯನ್ನು ಕೊಳ್ಳೆಹೊಡೆದ ದಿನದಲ್ಲಿ, ಮ್ಲೇಚ್ಛರು ಅವನ ಪುರದ್ವಾರಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಸೊತ್ತಿಗಾಗಿ ಚೀಟುಹಾಕಿದ ದಿನದಲ್ಲಿ ನೀನು ಅವನಿಗೆ ಸಹಾಯ ಮಾಡದೆ ಸುಮ್ಮನೆ ನಿಂತಿದ್ದೆ. ನೀನೂ ಅವರಂತೆ ನಿನ್ನ ತಮ್ಮನಿಗೆ ಒಬ್ಬ ಶತ್ರುವಿನಂತೆ ಕಂಡುಬಂದಿ.

[12] ನಿನ್ನ ತಮ್ಮನ ದುರ್ದಿನದಲ್ಲಿ ಅವನ ಅಪಾಯಕಾಲದಲ್ಲಿ ನೀನು ಸುಮ್ಮನೆ ನೋಡುತ್ತಿರಬಾರದಾಗಿತ್ತು. ಯೆಹೂದ್ಯರ ನಾಶನದ ದಿನದಲ್ಲಿ ಹಿಗ್ಗಬಾರದಾಗಿತ್ತು. ಅವರ ಇಕ್ಕಟ್ಟಿನ ವೇಳೆಯಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು.

[13] ನನ್ನ ಜನರ ವಿಪತ್ಕಾಲದಲ್ಲಿ ಅವರ ಪುರದ್ವಾರದೊಳಗೆ ಪ್ರವೇಶಿಸಬಾರದಾಗಿತ್ತು, ಅವರ ವಿಪತ್ಕಾಲದಲ್ಲಿ ಅವರ ಕೇಡಿಗೆ ನಿನ್ನಂಥವನ ಕಣ್ಣು ಅರಳಬಾರದಾಗಿತ್ತು. ಅವರ ವಿಪತ್ಕಾಲದಲ್ಲಿ ಅವರ ಆಸ್ತಿಯ ಮೇಲೆ ನೀನು ಕೈಹಾಕಬಾರದಾಗಿತ್ತು.

[14] ನೀನು ಮರಣದಿಂದ ಓಡಿಹೋಗುವವರನ್ನು ಹಿಡಿದು ಕೊಲ್ಲುವುದಕ್ಕೆ ಅವರ ಮಾರ್ಗಗಳಲ್ಲಿ ನಿಂತು ಅವರನ್ನು ಸಂಹರಿಸಿದೆ. ಆ ಇಕ್ಕಟ್ಟಿನ ವೇಳೆಯಲ್ಲಿ ಪ್ರಾಣ ಉಳಿಸಿಕೊಂಡವರನ್ನು ಹಿಡಿದು ಶತ್ರುಗಳಿಗೆ ಒಪ್ಪಿಸಿಕೊಟ್ಟೆ.

[15] ಯೆಹೋವನ ದಿನವು ಸಮಸ್ತ ಜನಾಂಗಗಳಿಗೆ ಸಮೀಪಿಸಿದೆ. ಎದೋಮೇ, ನೀನು ಮಾಡಿದ್ದೇ ನಿನಗಾಗುವುದು. ನಿನ್ನ ಕೃತ್ಯವೇ ನಿನ್ನ ತಲೆಗೆ ಬರುವುದು.

[16] ನನ್ನ ಜನರೇ, ನೀವು ನನ್ನ ಪವಿತ್ರಪರ್ವತದಲ್ಲಿ ನನ್ನ ದಂಡನೆಯ ಕಹಿ ಪಾನಮಾಡಿದ್ದಿರಿ. ನಿಮ್ಮ ಸುತ್ತಲಿರುವ ಸಕಲ ಜನಾಂಗಗಳೂ ಹೀಗೆ ನಿತ್ಯವಾಗಿ ಪಾನಮಾಡುವವು. ಹೌದು ಆ ರಾಜ್ಯಗಳು ಹೀಗೆ ಕುಡಿದು ಕಬಳಿಸಿ ಅಸ್ತಿತ್ವದಲ್ಲಿ ಇಲ್ಲದಂತೆ ಆಗುವವು.

[17] ಆದರೆ ಚೀಯೋನ್ ಪರ್ವತದಲ್ಲಿ ಅನೇಕರು ಉಳಿದಿರುವರು, ಆ ಪರ್ವತವು ಪರಿಶುದ್ಧವಾಗಿರುವುದು; ಯಾಕೋಬನ ವಂಶದವರು ತಮ್ಮ ಸ್ವತ್ತುಗಳನ್ನು ಅನುಭವಿಸುವರು.

[18] ಯಾಕೋಬನವಂಶ ಅಗ್ನಿಯಾಗಿಯೂ, ಯೋಸೇಫನ ವಂಶ ಜ್ವಾಲೆಯಾಗಿಯೂ, ಇವೆರಡೂ ಸೇರಿ ಕೊಳೆಯಂತೆ ಇರುವ ಏಸಾವನ ವಂಶವನ್ನು ಧಗಧಗನೆ ದಹಿಸಿ ಭಸ್ಮ ಮಾಡುವವು. ಏಸಾವನ ವಂಶದವರಲ್ಲಿ ಯಾರೂ ಉಳಿಯರು, ಇದು ಯೆಹೋವನೇ ನುಡಿದಿದ್ದಾನೆ.

[19] ಆಗ ದಕ್ಷಿಣ ಪ್ರಾಂತ್ಯದವರು ಏಸಾವಿನ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವರು, ಇಳಕಲಿನ ಪ್ರದೇಶದವರು ಫಿಲಿಷ್ಟಿಯರನ್ನೂ, ಎಫ್ರಾಯೀಮಿನ ಭೂಮಿಯನ್ನೂ ಮತ್ತು ಸಮಾರ್ಯದ ನೆಲವನ್ನೂ ವಶಮಾಡಿಕೊಳ್ಳುವರು. ಬೆನ್ಯಾಮೀನಿನವರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು.

[20] ಸೆರೆಹೋಗಿರುವ ಆ ದಂಡಿನ ಇಸ್ರಾಯೇಲರು ಕಾನಾನ್ಯರ ದೇಶವನ್ನು ಚಾರೆಪತಿನವರೆಗೆ ತಮ್ಮದಾಗಿ ಮಾಡಿಕೊಳ್ಳುವರು. ಸೆಫಾರ ದಿನದಲ್ಲಿ ಸೆರೆಯಾಗಿ ಹೋಗಿರುವ ಯೆರೂಸಲೇಮಿನವರು ದಕ್ಷಿಣ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.

[21] ರಕ್ಷಕರು ಚೀಯೋನ್ ಪರ್ವತದಲ್ಲಿ ಎದ್ದು ಏಸಾವನ ಪರ್ವತವನ್ನು ಆಳುವರು. ಆಗ ಆ ರಾಜ್ಯವು ಯೆಹೋವನದಾಗಿರುವುದು.