[1] ನಾನು ಅರಸನ ಪಾನಸೇವಕನಾಗಿದ್ದನು. ಅರಸನಾದ ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದ ಚೈತ್ರಮಾಸದಲ್ಲಿ ದ್ರಾಕ್ಷಾರಸ ಪಾನಮಾಡುವ ಹೊತ್ತಿನಲ್ಲಿ ನಾನು ದ್ರಾಕ್ಷಾರಸವನ್ನು ತಂದು ಅವನಿಗೆ ಕೊಟ್ಟೆನು. ನಾನು ಅರಸನ ಸನ್ನಿಧಿಯಲ್ಲಿ ಇದ್ದಾಗ ಹಿಂದೆ ಎಂದೂ ಮನಗುಂದಿದವನಂತೆ ಇರಲಿಲ್ಲ.
[2] ಅರಸನು ನನಗೆ, “ನಿನ್ನ ಮುಖ ಕಳೆಗುಂದಿರುವುದೇಕೆ? ನೀನು ಅಸ್ವಸ್ಥನಂತೆ ಕಾಣುವುದಿಲ್ಲ; ಇದು ಮನೋವೇದನೆಯಿಂದಾಗಿದೆಯೇ ಹೊರತು ಬೇರೇನೂ ಕಾರಣ ಇರಲಾರದು” ಎಂದು ಹೇಳಲು ನನಗೆ ಮಹಾ ಭೀತಿಯುಂಟಾಯಿತು.
[3] ನಾನು ಅರಸನಿಗೆ, “ಅರಸನು ಚಿರಂಜೀವಿಯಾಗಿರಲಿ! ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ, ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟು ಹೋಗಿವೆ; ಹೀಗಿರುವಲ್ಲಿ ನನ್ನ ಮುಖವು ಕಳೆಗುಂದದೆ ಇರುವುದು ಹೇಗೆ?” ಎಂದು ಹೇಳಿದೆನು.
[4] ಆಗ ಅರಸನು, “ನಿನ್ನ ಅಪೇಕ್ಷೆಯೇನು” ಎಂದು ನನ್ನನ್ನು ಕೇಳಿದನು. ಆಗ ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ,
[5] ಅರಸನಿಗೆ ಹೀಗೆ ಉತ್ತರಕೊಟ್ಟೆನು, “ಅರಸನೇ ನಿಮ್ಮ ಚಿತ್ತವಿರುವುದಾದರೆ ಮತ್ತು ತಮ್ಮ ಸೇವಕನಾದ ನಾನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವನ್ನು ತಿರುಗಿ ಕಟ್ಟುವುದಕ್ಕಾಗಿ ಯೆಹೂದ ದೇಶಕ್ಕೆ ಹೋಗಲು ನನಗೆ ಅಪ್ಪಣೆಯಾಗಬೇಕು” ಎಂದು ಹೇಳಿದೆನು.
[6] ರಾಣಿಯು ಅರಸನ ಹತ್ತಿರದಲ್ಲೇ ಕುಳಿತುಕೊಂಡಿದ್ದಳು. ಅರಸನು ನನಗೆ, “ಪ್ರಯಾಣಕ್ಕೆ ನಿನಗೆಷ್ಟು ಕಾಲ ಬೇಕು? ಯಾವಾಗ ಹಿಂದಿರುಗುವಿ” ಎಂದು ವಿಚಾರಿಸಿದಾಗ ನಾನು ಕಾಲವನ್ನು ಸೂಚಿಸಲು ಅರಸನು ಒಪ್ಪಿಕೊಂಡು ಅಪ್ಪಣೆಕೊಟ್ಟನು.
[7] ತರುವಾಯ ನಾನು ಅರಸನಿಗೆ, “ನದಿಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳ ಮೂಲಕ ಹಾದು ಯೆಹೂದ ಸೀಮೆಗೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡುವ ಹಾಗೂ
[8] ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಿಲುಗಳು, ಪಟ್ಟಣದ ಪೌಳಿಗೋಡೆ, ನಾನು ಸೇರುವ ಮನೆ ಇವುಗಳಿಗೆ ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡುವ ಹಾಗೆ ಅರಸನು ನನಗೆ ಪತ್ರಗಳನ್ನು ಕೊಡಬೇಕು” ಎಂದು ಬಿನ್ನವಿಸಲು, ನನ್ನ ದೇವರ ಕೃಪಾಹಸ್ತಪಾಲನೆ ನನಗಿದ್ದುದರಿಂದ ಅರಸನು ಅವುಗಳನ್ನು ನನಗೆ ಕೊಟ್ಟನು.
[9] ಅರಸನು ನನ್ನನ್ನು ಕಳುಹಿಸುವಾಗ ಸೇನಾಧಿಪತಿಗಳನ್ನೂ, ರಾಹುತರನ್ನೂ ನನ್ನೊಡನೆ ಕಳುಹಿಸಿದನು. ಹೀಗೆ ನಾನು ನದಿಯಾಚೆಯ ದೇಶಾಧಿಪತಿಗಳ ಬಳಿಗೆ ಬಂದು ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು.
[10] ಇಸ್ರಾಯೇಲರ ಹಿತಚಿಂತಕನೊಬ್ಬನು ಬಂದಿದ್ದಾನೆಂಬ ವರ್ತಮಾನವು ಹೋರೋನ್ ಪಟ್ಟಣದವನಾದ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನಿಗೂ ತಲುಪಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.
[11] ಅನಂತರ ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿನಗಳವರೆಗೂ ಇದ್ದೆನು.
[12] ಆಮೇಲೆ ಯೆರೂಸಲೇಮಿಗಾಗಿ ಮಾಡತಕ್ಕ ಕಾರ್ಯದ ವಿಷಯವಾಗಿ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾನೆಂಬುದನ್ನು ಯಾರಿಗೂ ತಿಳಿಸದೆ, ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟೆನು. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ.
[13] ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಿಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಿಲುಗಳನ್ನೂ ನೋಡುತ್ತಾ, ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆನು.
[14] ಅಲ್ಲಿಂದ ಬುಗ್ಗೆ ಬಾಗಿಲನ್ನು ಹಾದು ಅರಸನ ಕೊಳಕ್ಕೆ ಬಂದೆನು. ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿರಲಿಲ್ಲ.
[15] ಅದಕಾರಣ ನಾನು ರಾತ್ರಿಯಲ್ಲಿ ಹಳ್ಳದ ಬದಿಯ ಮಾರ್ಗವಾಗಿ ಹೋಗಿ ಗೋಡೆಯನ್ನು ಪರೀಕ್ಷಿಸಿದೆನು. ಆ ಮೇಲೆ ಪುನಃ ತಗ್ಗಿನ ಬಾಗಿಲಿನಿಂದ ಹಿಂತಿರುಗಿ ಮನೆಗೆ ಬಂದೆನು.
[16] ನಾನು ಆ ವರೆಗೆ ಯೆಹೂದ್ಯರಿಗೂ, ಯಾಜಕರಿಗೂ, ಶ್ರೀಮಂತರಿಗೂ, ಅಧಿಕಾರಿಗಳಿಗೂ ಕೆಲಸ ಮಾಡುವ ಇತರರಿಗೂ ಏನೂ ತಿಳಿಸದೆ ಇದ್ದುದರಿಂದ ನಾನು ಎಲ್ಲಿ ಹೋಗಿದ್ದೆನು, ಏನು ಮಾಡಿದೆನು ಎಂಬುದು ಯಾರಿಗೂ ಗೊತ್ತಾಗಲಿಲ್ಲ.
[17] ನಾನು ಅವರಿಗೆ, “ನಮ್ಮ ದುರಾವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ; ಯೆರೂಸಲೇಮ್ ಪಟ್ಟಣವು ಹಾಳು ಬಿದ್ದಿದೆ, ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ; ಬನ್ನಿರಿ, ಯೆರೂಸಲೇಮಿನ ಗೋಡೆಯನ್ನು ಕಟ್ಟೋಣ. ಹೀಗೆ ಮಾಡಿದರೆ ನಮ್ಮ ಮೇಲಣ ನಿಂದೆಯು ಅಳಿಸಿ ಹೋಗುವುದು” ಎಂದು ಹೇಳಿದೆನು.
[18] ಇದಲ್ಲದೆ, ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿದ್ದನ್ನೂ, ಅರಸನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆನು. ಆಗ ಅವರು, “ಬನ್ನಿರಿ, ಕಟ್ಟೋಣ” ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಪರಸ್ಪರ ಧೈರ್ಯ ನೀಡಿದರು.
[19] ಹೋರೋನಿನವನಾದ ಸನ್ಬಲ್ಲಟನೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನೂ, ಅರಬಿಯನಾದ ಗೆಷೆಮನೂ ಈ ವರ್ತಮಾನವನ್ನು ಕೇಳಿದಾಗ ಅವರು ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿ, “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರುದ್ಧವಾಗಿ ತಿರುಗಿ ಬೀಳಬೇಕೆಂದಿದ್ದೀರೋ?” ಎಂದು ಕೇಳಿದರು.
[20] ನಾನು ಅವರಿಗೆ, “ಪರಲೋಕದ ದೇವರು ನಮಗೆ ಕಾರ್ಯವನ್ನು ಸಾಧಿಸಿಕೊಡುವನು. ಆದುದರಿಂದ ಆತನ ಸೇವಕರಾದ ನಾವು ಕಟ್ಟುವುದಕ್ಕೆ ಮನಸ್ಸುಮಾಡಿದ್ದೇವೆ. ನಿಮಗಾದರೋ ಯೆರೂಸಲೇಮಿನಲ್ಲಿ ಯಾವ ಪಾಲೂ, ಹಕ್ಕೂ, ಹೆಸರೂ, ಸ್ಮಾರಕವೂ ಇರುವುದಿಲ್ಲ” ಎಂದು ಉತ್ತರಕೊಟ್ಟೆನು.