Skip to content
Opens in a new window
Listen to this chapter • 4:11

[1] ಒಂದು ದಿನ ರೂತಳ ಅತ್ತೆ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮತ್ತೆ ಗೃಹಿಣಿಯಾಗಿ ಸುಖದಿಂದ ಬಾಳುವಂತೆ, ನಾನು ನಿನಗೆ ವಿಶ್ರಾಂತಿ ಸ್ಥಳ ಏರ್ಪಾಟು ಮಾಡುವುದು ನನ್ನ ಕರ್ತವ್ಯವಲ್ಲವೇ?

[2] ಈಗ ನೀನು ಯಾರ ದಾಸಿಯರ ಸಂಗಡ ಇದ್ದೀಯೋ, ಆ ಬೋವಜನು ನಮ್ಮ ಬಂಧುವಾಗಿದ್ದಾನೆ. ಇಗೋ, ಅವನು ರಾತ್ರಿಯಲ್ಲಿ ಕಣದಲ್ಲಿ ಜವೆಗೋಧಿಯನ್ನು ತೂರುವನು.

[3] ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ತಿಂದು ಕುಡಿದು ತೀರಿಸುವವರೆಗೂ ಅವನಿಗೆ ನೀನು ಅಲ್ಲಿರುವದು ಅವನಿಗೆ ತಿಳಿಯದಿರಲಿ.

[4] ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳಿದುಕೊಂಡು ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು,” ಎಂದಳು.

[5] ಅದಕ್ಕೆ ರೂತಳು, “ನೀವು ನನಗೆ ಹೇಳಿದ್ದನ್ನೆಲ್ಲಾ ಮಾಡುವೆನು,” ಎಂದಳು.

[6] ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದಳು.

[7] ಬೋವಜನು ತಿಂದು ಕುಡಿದು ಸಂತುಷ್ಟನಾಗಿದ್ದನು. ಅವನು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿಕೊಂಡನು. ಆಗ ರೂತಳು ಮೆಲ್ಲಗೆ ಬಂದು ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ತೆಗೆದು ಮಲಗಿಕೊಂಡಳು.

[8] ಆದರೆ ಮಧ್ಯರಾತ್ರಿಯಲ್ಲಿ ಬೋವಜನು ಹೆದರಿ ತಿರುಗಿ ನೋಡಿದಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವುದನ್ನು ಕಂಡನು.

[9] ಆಗ ಅವನು, “ನೀನು ಯಾರು?” ಎಂದನು. ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು.

[10] ಅದಕ್ಕೆ ಅವನು, “ನನ್ನ ಮಗಳೇ, ಯೆಹೋವ ದೇವರಿಂದ ನಿನಗೆ ಆಶೀರ್ವಾದವಾಗಲಿ, ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದುದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದ ದಯೆಯು ಹೆಚ್ಚಾಗಿದೆ.

[11] ಈಗ ನನ್ನ ಮಗಳೇ, ನೀನು ಭಯಪಡಬೇಡ. ನಿನಗೆ ಬೇಕಾಗಿರುವುದನ್ನು ನಿನಗೆ ಮಾಡುವೆನು. ನೀನು ಗುಣವತಿಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರೂ ಬಲ್ಲರು.

[12] ಈಗ ನಾನು ನಿನ್ನ ವಿಮೋಚಿಸತಕ್ಕ ಸಮೀಪ ಬಂಧುವಾಗಿದ್ದೇನೆ ಎಂಬುದು ನಿಜವೇ. ಆದರೆ ನನಗಿಂತಲೂ ಸಮೀಪಸ್ಥನಾದ ಬಂಧುವು ಒಬ್ಬನಿದ್ದಾನೆ.

[13] ಈ ರಾತ್ರಿಯಲ್ಲಿ ಇಲ್ಲಿರು. ನಾಳೆ ಬೆಳಿಗ್ಗೆ ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಿದರೆ ಒಳ್ಳೆಯದು. ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಲು ಮನಸ್ಸಿಲ್ಲದಿದ್ದರೆ ಯೆಹೋವ ದೇವರ ಜೀವದಾಣೆ, ನಾನೇ ಅದನ್ನು ಮಾಡುವೆನು. ಉದಯಕಾಲದವರೆಗೂ ಇಲ್ಲಿಯೇ ಮಲಗಿರು,” ಎಂದನು.

[14] ಅವಳು ಹಾಗೆಯೇ ಉದಯಕಾಲದವರೆಗೂ ಅವನ ಪಾದಗಳ ಬಳಿಯಲ್ಲಿ ಮಲಗಿದ್ದು ಯಾರಿಗೂ ಗೊತ್ತಾಗಬಾರದೆಂದು ಹೊತ್ತಿಗೆ ಮುಂಚೆ ಎದ್ದಳು. ಅವನು, “ಒಬ್ಬ ಸ್ತ್ರೀ ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯದಿರಲಿ,” ಎಂದನು.

[15] ಅವನು, “ನಿನ್ನ ಮೇಲ್ಹೊದಿಕೆಯನ್ನು ಹಿಡಿ,” ಎಂದನು. ಅವಳು ಅದನ್ನು ಹಿಡಿದಾಗ ಅವನು ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಅವಳು ಅದನ್ನು ಹೊತ್ತುಕೊಂಡು ಪಟ್ಟಣಕ್ಕೆ ಬಂದಳು.

[16] ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು, “ನನ್ನ ಮಗಳೇ, ಏನು ನಡೆಯಿತು?” ಎಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು.

[17] “ ‘ನೀನು ನಿನ್ನ ಅತ್ತೆಯ ಬಳಿಗೆ ಬರೀ ಕೈಯಾಗಿ ಹೋಗಬಾರದು’ ಎಂದು ಅವನು ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ನನಗೆ ಕೊಟ್ಟನು,” ಎಂದಳು.

[18] ಅದಕ್ಕೆ ನೊವೊಮಿ, “ನನ್ನ ಮಗಳೇ, ಈ ಕಾರ್ಯ ಏನಾಗುವುದೋ, ಎಂದು ನೀನು ತಿಳಿಯುವವರೆಗೂ ಸುಮ್ಮನೆ ಇರು. ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವವರೆಗೂ ವಿಶ್ರಾಂತಿಯಲ್ಲಿ ಇರಲಾರನು,” ಎಂದಳು.

ರೂತಳು — Chapters