Skip to content
Opens in a new window
Listen to this chapter • 4:42

[1] ಕಡೆಯದಾಗಿ ನನ್ನ ಪ್ರಿಯರೇ, ಕರ್ತನಲ್ಲಿ ಆನಂದಿಸಿರಿ. ಬರೆದದ್ದನ್ನೇ ನಿಮಗೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ, ಅದು ನಿಮಗೆ ಸುರಕ್ಷಿತವೇ.

[2] ನಾಯಿಗಳಂತೆ ವರ್ತಿಸುವವರಿಗೆ ಎಚ್ಚರಿಕೆ. ದುಷ್ಟಕಾರ್ಯಮಾಡುವವರಿಗೆ ಎಚ್ಚರಿಕೆ, ಸುಳ್ಳು ಸುನ್ನತಿಗಾಗಿ ವಾಗ್ವಾದಿಸುವವರಿಗೆ ಎಚ್ಚರಿಕೆ.

[3] ಏಕೆಂದರೆ ದೇವರನ್ನು ಪವಿತ್ರಾತ್ಮರಿಂದ ಆರಾಧಿಸಿ ಕ್ರಿಸ್ತ ಯೇಸುವನ್ನು ಮಹಿಮೆಪಡಿಸುತ್ತಾ ಹರ್ಷಗೊಳ್ಳುವವರೂ ಮಾಂಸದಲ್ಲಿ ಭರವಸೆಯಿಡದ ನಾವೇ ಸುನ್ನತಿಯಾಗಿದ್ದೇವೆ.

[4] ಮಾಂಸದಲ್ಲಿ ಭರವಸೆ ಇಡಲು ನನಗೆ ಸಾಕಷ್ಟು ಕಾರಣಗಳಿವೆ. ಬೇರೆ ಯಾವನಾದರೂ ಮಾನವೀಯ ಪ್ರಯತ್ನಗಳಲ್ಲಿ ಭರವಸೆ ಇಡಬಹುದೆಂದು ಭಾವಿಸುವುದಾದರೆ, ನಾನು ಅದಕ್ಕಿಂತಲೂ ಹೆಚ್ಚಾಗಿ ಹೇಳಬಹುದು:

[5] ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು; ಬೆನ್ಯಾಮೀನನ ಕುಲದವನು; ಹೀಬ್ರಿಯರಿಂದ ಹುಟ್ಟಿದ ಹೀಬ್ರಿಯನು; ಮೋಶೆಯ ನಿಯಮದ ಅನುಸಾರವಾಗಿ ನಾನು ಫರಿಸಾಯನು.

[6] ಆಸಕ್ತಿಯನ್ನು ನೋಡಿದರೆ, ನಾನು ಸಭೆಯ ಹಿಂಸಕನು; ಮೋಶೆಯ ನಿಯಮದಲ್ಲಿರುವ ನೀತಿಯ ಅನುಸಾರವಾಗಿ ನಾನು ನಿರ್ದೋಷಿ.

[7] ನನಗೆ ಲಾಭವಾಗಿದ್ದ ಎಲ್ಲವನ್ನೂ ಈಗ ನಾನು ಕ್ರಿಸ್ತನ ನಿಮಿತ್ತ ನಷ್ಟವೆಂದು ಎಣಿಸುತ್ತೇನೆ.

[8] ಇದಲ್ಲದೆ, ನನ್ನ ಕರ್ತದೇವರು ಆಗಿರುವ ಕ್ರಿಸ್ತ ಯೇಸುವನ್ನು ಅರಿತುಕೊಳ್ಳುವುದೇ ಅತಿ ಶ್ರೇಷ್ಠವಾದುದ್ದೆಂದು, ನಾನು ಎಲ್ಲವನ್ನೂ ನಷ್ಟವೆಂದು ಎಣಿಸುತ್ತೇನೆ. ಕ್ರಿಸ್ತನನ್ನೇ ಲಾಭವನ್ನಾಗಿಸಿಕೊಳ್ಳಲು ನಾನು ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ.

[9] ಹೀಗೆ ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು ಅವರಲ್ಲಿ ಒಂದಾಗಿರ ಬಯಸುತ್ತೇನೆ. ನಿಯಮದಿಂದ ಬರುವ ಸ್ವನೀತಿಯನ್ನು ಆಶ್ರಯಿಸಿಕೊಳ್ಳದೆ, ಕ್ರಿಸ್ತನನ್ನು ನಂಬುವುದರ ಮೂಲಕ ವಿಶ್ವಾಸದ ಆಧಾರದ ಮೇಲೆ ದೇವರು ಕೊಡುವ ನೀತಿಯನ್ನೇ ಹೊಂದಿದವನಾಗಿರ ಬಯಸುತ್ತೇನೆ.

[10] ಕ್ರಿಸ್ತನನ್ನೂ ಅವರ ಪುನರುತ್ಥಾನದ ಶಕ್ತಿಯನ್ನೂ ನಾನು ಅರಿತುಕೊಂಡು, ಕ್ರಿಸ್ತನ ಶ್ರಮೆಯಲ್ಲಿ ಪಾಲುಗೊಳ್ಳುವ ಅನ್ಯೋನ್ಯತೆಯನ್ನೂ ಅವರ ಮರಣದಲ್ಲಿ ಅವರ ಹಾಗೆ ಆಗುವುದನ್ನೂ ತಿಳಿಯುವುದೇ ನನ್ನ ಅಪೇಕ್ಷೆ.

[11] ಹೇಗಾದರೂ, ನಾನೂ ಸಹ ಸತ್ತವರೊಳಗಿಂದ ಪುನರುತ್ಥಾನ ಹೊಂದುವೆನು.

[12] ಇದನ್ನೆಲ್ಲಾ ನಾನು ಸಾಧಿಸಿದ್ದೇನೆಂದಲ್ಲ ಅಥವಾ ಈಗಲೇ ನಾನು ಪರಿಪೂರ್ಣನಾಗಿದ್ದೇನೆಂದೂ ನಾನು ಹೇಳುತ್ತಾ ಇಲ್ಲ. ಆದರೆ ಕ್ರಿಸ್ತ ಯೇಸು ನನ್ನನ್ನು ಅನುಸರಿಸಬೇಕೆಂದು ಯಾವುದಕ್ಕಾಗಿ ಆರಿಸಿಕೊಂಡರೋ, ಆ ಪೂರ್ಣತೆಯೆಡೆಗೆ ತಲುಪುವಂತೆ ನಾನು ಪರಿಶ್ರಮಿಸುತ್ತಿದ್ದೇನೆ.

[13] ಪ್ರಿಯರೇ, ನಾನಂತೂ ಆ ಗುರಿಯನ್ನು ತಲುಪಿದ್ದೇನೆಂದು ಭಾವಿಸಿಕೊಂಡಿಲ್ಲ. ಆದರೆ ಒಂದು ಸಂಗತಿ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು, ಮುಂದಿನ ವಿಷಯಗಳನ್ನು ಮಾತ್ರ ಲಕ್ಷ್ಯವನ್ನಾಗಿ ಮಾಡಿಕೊಂಡು ಅದನ್ನೇ ಪಡೆದುಕೊಳ್ಳುವುದಕ್ಕಾಗಿ ಓಡುತ್ತಿದ್ದೇನೆ.

[14] ಹೀಗೆ ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಸ್ವರ್ಗೀಯ ಕರೆಯ ಬಹುಮಾನದ ಗುರಿಯೆಡೆಗೆ ಮುಂದೆ ಸಾಗುತ್ತಾ ಇದ್ದೇನೆ.

[15] ಆದ್ದರಿಂದ ನಮ್ಮಲ್ಲಿ ಆತ್ಮಿಕ ಪರಿಪಕ್ವತೆಯುಳ್ಳವರು ಇದೇ ಮನೋಭಾವವುಳ್ಳವರಾಗಿರಬೇಕು. ಕೆಲವು ವಿಷಯಗಳ ಮೇಲೆ ಭಿನ್ನಾಭಿಪ್ರಾಯವಿದ್ದರೆ, ಅದನ್ನೂ ದೇವರು ನಿಮಗೆ ಸ್ಪಷ್ಟಪಡಿಸುವರು.

[16] ಆದರೂ ಈಗಾಗಲೇ ನಾವು ಯಾವುದರಲ್ಲಿ ಮುಂದುವರೆದಿದ್ದೇವೋ ಆ ಸೂತ್ರದ ಪ್ರಕಾರ ಒಂದೇ ಮನಸ್ಸುಳ್ಳವರಾಗಿ ಬಾಳೋಣ.

[17] ಪ್ರಿಯರೇ, ನೀವು ನನ್ನನ್ನು ಅನುಸರಿಸುವವರಾಗಿರಿ. ನಮ್ಮ ಹಾಗೆ ಬಾಳುವ ಆದರ್ಶದ ಪ್ರಕಾರ ನಡೆದುಕೊಳ್ಳುವವರನ್ನು ಗಮನಿಸಿರಿ.

[18] ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ಬಾಳುತ್ತಿದ್ದಾರೆ. ಅವರ ವಿಷಯದಲ್ಲಿ ನಾನು ನಿಮಗೆ ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಕಣ್ಣೀರಿನಿಂದ ಹೇಳುತ್ತೇನೆ.

[19] ವಿನಾಶನವೇ ಅವರ ಅಂತ್ಯವು. ಹೊಟ್ಟೆಯೇ ಅವರ ದೇವರು. ನಾಚಿಕೆ ಕಾರ್ಯಗಳಲ್ಲಿಯೇ ಅವರ ಪ್ರಭಾವ. ಅವರು ಲೌಕಿಕವಾದವುಗಳ ಮೇಲೆ ಮನಸ್ಸಿಡುತ್ತಾರೆ.

[20] ಆದರೆ ನಮ್ಮ ಪೌರತ್ವವು ಪರಲೋಕದಲ್ಲಿದೆ. ನಾವು ಪರಲೋಕದಿಂದಲೇ ರಕ್ಷಕರಾಗಿರುವ ಒಬ್ಬರ ಬರುವಿಕೆಗಾಗಿ ಆತುರದಿಂದ ಎದುರುನೋಡುತ್ತಿದ್ದೇವೆ. ಅವರೇ ಕರ್ತದೇವರು ಆಗಿರುವ ಕ್ರಿಸ್ತ ಯೇಸು.

[21] ಹೀಗೆ ಕ್ರಿಸ್ತ ಯೇಸು ಎಲ್ಲವನ್ನೂ ತಮಗೆ ಅಧೀನ ಮಾಡಿಕೊಳ್ಳುವ ತಮ್ಮ ಶಕ್ತಿಯ ಪ್ರಕಾರ, ಮಹಿಮೆಯುಳ್ಳ ತಮ್ಮ ದೇಹಕ್ಕೆ ಸಮವಾಗಿ ಸಾರೂಪ್ಯವಾಗುವಂತೆ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸುವರು.

ಫಿಲಿಪ್ಪಿಯವರಿಗೆ — Chapters