Skip to content
Opens in a new window
Listen to this chapter • 5:04

[1] “ಇಗೋ, ನಾನು ನನ್ನ ದೂತನನ್ನು ಕಳುಹಿಸುತ್ತೇನೆ. ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು. ನೀವು ಹುಡುಕುವ ಕರ್ತರು ಫಕ್ಕನೆ ತಮ್ಮ ಆಲಯಕ್ಕೆ ಬರುವರು. ನೀವು ಇಷ್ಟಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[2] ಆದರೆ ಅವರ ಆಗಮನದ ದಿವಸದಲ್ಲಿ ಯಾರು ತಾಳುವರು? ಅವರು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಏಕೆಂದರೆ ಅವರು ಅಕ್ಕಸಾಲಿಗನ ಪರಿಶೋಧಿಸುವ ಬೆಂಕಿಯ ಹಾಗೆಯೂ, ಅಗಸನ ಸಾಬೂನಿನ ಹಾಗೆಯೂ ಇದ್ದಾರೆ.

[3] ದೇವರು ಬೆಳ್ಳಿಯನ್ನು ಪರಿಶೋಧಿಸಿ ಶುದ್ಧೀಕರಿಸುವ ಅಕ್ಕಸಾಲಿಗನಂತೆ ಕುಳಿತುಕೊಂಡು ಲೇವಿಯರನ್ನು ಶುದ್ಧಮಾಡುವರು. ಬಂಗಾರದ ಹಾಗೆಯೂ, ಬೆಳ್ಳಿಯ ಹಾಗೆಯೂ ಶುದ್ಧಮಾಡುವರು. ಆಗ ಅವರು ಯೆಹೋವ ದೇವರಿಗೆ ನೀತಿಯ ಕಾಣಿಕೆಯನ್ನು ಅರ್ಪಿಸುವರು.

[4] ಯೆಹೂದದ ಮತ್ತು ಯೆರೂಸಲೇಮಿನ ಕಾಣಿಕೆಯು ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಇದ್ದಂತೆ ಯೆಹೋವ ದೇವರಿಗೆ ಮೆಚ್ಚಿಕೆಯಾಗಿರುವುದು.

[5] “ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುತ್ತೇನೆ. ಆಗ ಮಾಟಗಾರರಿಗೆ, ವ್ಯಭಿಚಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ, ಮತ್ತು ನನಗೆ ಭಯಪಡದಿರುವವರಿಗೂ ನ್ಯಾಯತೀರಿಸಿ, ಶೀಘ್ರಸಾಕ್ಷಿಯಾಗಿರುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[6] “ನಾನು ಯೆಹೋವ ದೇವರು. ನಾನು ಬದಲಾಗುವುದಿಲ್ಲ. ಆದ್ದರಿಂದ ನೀವು ಯಾಕೋಬಿನ ವಂಶಜರೇ, ನಾಶವಾಗುವುದಿಲ್ಲ.

[7] ನಿಮ್ಮ ತಂದೆಗಳ ದಿವಸಗಳಿಂದಲೇ ನನ್ನ ನಿಯಮಗಳನ್ನು ಬಿಟ್ಟುಹೋಗಿದ್ದೀರಿ. ಅವುಗಳನ್ನು ಅನುಸರಿಸಲಿಲ್ಲ. ನನ್ನ ಬಳಿಗೆ ತಿರುಗಿಕೊಳ್ಳಿರಿ. ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಆದರೆ ನೀವು, ‘ಯಾವುದರಲ್ಲಿ ತಿರುಗಿಕೊಳ್ಳೋಣ?’ ಎಂದು ಹೇಳುತ್ತೀರಿ.

[8] “ಮನುಷ್ಯನು ದೇವರಿಂದ ಕದ್ದುಕೊಳ್ಳಲು ಸಾಧ್ಯವೇ? ಆದರೂ ನೀವು ನನ್ನಿಂದ ಕಳ್ಳತನ ಮಾಡಿದ್ದೀರಿ. “ಆದರೆ ನೀವು, ‘ಯಾವುದರಲ್ಲಿ ನಿನ್ನದನ್ನು ಕಳ್ಳತನ ಮಾಡಿದ್ದೇವೆ?’ ಎಂದು ಕೇಳುತ್ತೀರಿ. “ದಶಮಭಾಗ ಮತ್ತು ಅರ್ಪಣೆಗಳಲ್ಲಿಯೇ!

[9] ಇದರಿಂದ ಶಾಪವು ನಿಮಗಾಯಿತು, ಏಕೆಂದರೆ ನೀವು, ಈ ಸಮಸ್ತ ಜನಾಂಗವೇ ನನ್ನಲ್ಲಿ ಕಳ್ಳತನ ಮಾಡುತ್ತಿದ್ದಿರಿ.

[10] ನನ್ನ ಆಲಯದಲ್ಲಿ ಆಹಾರ ಇರುವಂತೆ ಹತ್ತನೆಯ ಪಾಲುಗಳನ್ನೆಲ್ಲಾ ಬೊಕ್ಕಸಕ್ಕೆ ತನ್ನಿರಿ. ನಾನು ನಿಮಗೆ ಪರಲೋಕದ ಮಹಾದ್ವಾರಗಳನ್ನು ತೆರೆದು, ಸ್ಥಳ ಹಿಡಿಸಲಾರದಷ್ಟು ನಿಮಗೆ ಆಶೀರ್ವಾದವನ್ನು ಸುರಿಸದಿರುವೆನೋ, ಇಲ್ಲವೋ ಎಂಬುದನ್ನು ನೀವು ಈಗ ನನ್ನನ್ನು ಪರೀಕ್ಷಿಸಿ ನೋಡಿರಿ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[11] “ನಿಮ್ಮ ಬೆಳೆಯನ್ನು ತಿಂದು ಬಿಡದಂತೆ ಕ್ರಿಮಿಕೀಟಗಳನ್ನು ತಡೆಯುವೆನು. ನಿಮ್ಮ ದ್ರಾಕ್ಷಿ ತೋಟಗಳಲ್ಲಿಂದ ದ್ರಾಕ್ಷಿಹಣ್ಣುಗಳನ್ನು ಉದುರಿಸಿ ಬಿಡುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[12] “ಆಗ ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು. ಏಕೆಂದರೆ ನೀವು ರಮ್ಯವಾದ ದೇಶವಾಗುವಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[13] “ನೀವು ನನಗೆ ವಿರೋಧವಾಗಿ ಅಹಂಕಾರದಿಂದ ಮಾತುಗಳನ್ನಾಡಿದಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆದರೂ ನೀವು, ‘ನಿನಗೆ ವಿರೋಧವಾಗಿ ನಾವು ಏನು ಮಾತಾಡಿದ್ದೇವೆ?’ ಎನ್ನುತ್ತೀರಿ.”

[14] “ನೀವು, ‘ದೇವರನ್ನು ಸೇವಿಸುವುದು ವ್ಯರ್ಥ, ನಾವು ಆತನ ನಿಯಮಗಳನ್ನು ಕೈಗೊಂಡು ಸೇನಾಧೀಶ್ವರ ಯೆಹೋವ ದೇವರ ಮುಂದೆ ದುಃಖಪಡುವುದರಿಂದ ಏನು ಪ್ರಯೋಜನವೆಂದೂ,

[15] ಈಗ ನಾವು ಗರ್ವಿಷ್ಠರನ್ನು ಭಾಗ್ಯವಂತರೆಂದನ್ನುತ್ತೇವೆ. ದುಷ್ಟರು ಅಭಿವೃದ್ಧಿಯಾಗುತ್ತಿದ್ದಾರೆ. ದೇವರಿಗೆ ಸವಾಲು ಹಾಕಿದವರು ತಪ್ಪಿಸಿಕೊಂಡಿದ್ದಾರೆ’ ಎಂದು ಹೇಳಿದ್ದೀರಿ.”

[16] ಆಗ ಯೆಹೋವ ದೇವರಿಗೆ ಭಯಪಡುವವರು, ಒಬ್ಬರ ಸಂಗಡಲೊಬ್ಬರು ಮಾತಾಡಿಕೊಂಡರು. ಯೆಹೋವ ದೇವರು ಕಿವಿಗೊಟ್ಟು ಅದನ್ನು ಕೇಳಿದರು. ಇದಲ್ಲದೆ ಯೆಹೋವ ದೇವರಿಗೆ ಭಯಪಟ್ಟು, ಅವರ ನಾಮವನ್ನು ಗೌರವಿಸುವವರ ಬಗ್ಗೆ ಅವರು ತಮ್ಮ ಮುಂದೆ ಇದ್ದ ಜ್ಞಾಪಕ ಪುಸ್ತಕದಲ್ಲಿ ಬರೆಸಿದರು.

[17] “ನಾನು ನನ್ನ ಅಮೂಲ್ಯ ಸೊತ್ತನ್ನು ಸೇರಿಸಿಕೊಳ್ಳುವ ಆ ದಿವಸದಲ್ಲಿ ಅವರು ನನ್ನವರಾಗಿರುವರು. ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ, ಅವರನ್ನು ಕನಿಕರಿಸುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[18] ಆಗ ನೀವು ನೀತಿವಂತನಿಗೂ, ದುಷ್ಟನಿಗೂ, ದೇವರ ಸೇವೆ ಮಾಡುವವನಿಗೂ, ಮಾಡದವನಿಗೂ ಇರುವ ವ್ಯತ್ಯಾಸವನ್ನು ಪುನಃ ನೋಡುವಿರಿ.

ಮಲಾಕಿ — Chapters