Skip to content
Opens in a new window
Listen to this chapter • 2:10

[1] ಯೆಹೋವ ದೇವರ ವಾಕ್ಯವು ಎರಡನೆಯ ಸಾರಿ ಯೋನನಿಗೆ ಬಂದಿತು.

[2] “ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ, ನಾನು ನಿನಗೆ ಹೇಳಿದ ಸಂದೇಶವನ್ನು ಅದರ ನಿವಾಸಿಗಳಿಗೆ ಸಾರು,” ಎಂದು ಹೇಳಿದರು.

[3] ಹೀಗೆ ಯೋನನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ನಿನೆವೆಗೆ ಹೋದನು. ನಿನೆವೆಯು ಮೂರು ದಿವಸದ ಪ್ರಯಾಣದ ಮಹಾ ದೊಡ್ಡ ಪಟ್ಟಣವಾಗಿತ್ತು.

[4] ಆಗ ಯೋನನು ಒಂದು ದಿವಸದ ಪ್ರಯಾಣಮಾಡಿ, ಪಟ್ಟಣದಲ್ಲಿ ಪ್ರವೇಶಿಸಿ, “ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ನಾಶವಾಗುವುದು,” ಎಂದು ಕೂಗಿ ಹೇಳಿದನು.

[5] ನಿನೆವೆಯ ಮನುಷ್ಯರು, ದೇವರನ್ನು ನಂಬಿ, ಉಪವಾಸವನ್ನು ಸಾರಿ, ಅವರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನವರೆಗೂ ಗೋಣಿತಟ್ಟನ್ನು ಉಟ್ಟುಕೊಂಡರು.

[6] ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯಲ್ಲಿ ಕುಳಿತುಕೊಂಡನು.

[7] ಅವನು ನಿನೆವೆಯಲ್ಲಿ ಈ ಘೋಷಣೆಯನ್ನು ಮಾಡಿದನು: “ಅರಸನ ಮತ್ತು ಶ್ರೇಷ್ಠರ ತೀರ್ಪಿನ ಪ್ರಕಾರ: “ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನನ್ನೂ ರುಚಿ ನೋಡದಿರಲಿ, ಮೇಯದಿರಲಿ, ನೀರನ್ನು ಕುಡಿಯದಿರಲಿ.

[8] ಆದರೆ ಮನುಷ್ಯರೂ ಮೃಗಗಳೂ ಗೋಣಿತಟ್ಟು ಹಾಕಿಕೊಂಡು, ಜೋರಾದ ಧ್ವನಿಯಿಂದ ದೇವರಿಗೆ ಮೊರೆಯಿಡಲಿ. ಎಲ್ಲರೂ ತಮ್ಮ ತಮ್ಮ ದುರ್ಮಾರ್ಗಗಳನ್ನೂ, ತಮ್ಮ ತಮ್ಮ ಕೈಗಳಲ್ಲಿರುವ ಹಿಂಸಾಚಾರವನ್ನೂ ಬಿಟ್ಟು ತಿರುಗಲಿ.

[9] ಹೀಗೆ ಮಾಡಿದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ಅನುಕಂಪದಿಂದ ತಮ್ಮ ಉಗ್ರಕೋಪವನ್ನು ತಡೆದು, ನಾವು ನಾಶವಾಗದೆ ಉಳಿಸುವರೇನೋ, ಯಾರು ಬಲ್ಲರು?”

[10] ಆಗ ದೇವರು, ನಿನೆವೆಯವರು ತಮ್ಮ ದುರ್ಮಾರ್ಗವನ್ನು ಬಿಟ್ಟು ತಿರುಗಿಕೊಂಡರೆಂದು ಕಂಡು, ತಾವು ವಿಧಿಸುವುದಾಗಿ ನುಡಿದ ವಿನಾಶವನ್ನು ಅವರ ಮೇಲೆ ಬರಮಾಡದೆ, ಅವರನ್ನು ಕನಿಕರಿಸಿದರು.

ಯೋನನು — Chapters