Skip to content
Opens in a new window
Listen to this chapter • 5:57

[1] ಏಳನೆಯ ತಿಂಗಳಿನ, ಇಪ್ಪತ್ತೊಂದನೆಯ ದಿವಸದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಬಂದಿತು:

[2] “ಶೆಯಲ್ತಿಯೇಲನ ಮಗ ಮತ್ತು ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಇದನ್ನು ಹೇಳತಕ್ಕದ್ದು.

[3] ಈ ಆಲಯದ ಅದರ ಪೂರ್ವದ ಮಹಿಮೆಯನ್ನು ನೋಡಿದವರೊಳಗೆ ಉಳಿದವನು ನಿಮ್ಮಲ್ಲಿ ಯಾರು ಇದ್ದಾರೆ? ಈಗ ಅದು ಹೇಗೆ ಕಾಣುತ್ತದೆ? ಇದು ನಿಮ್ಮ ದೃಷ್ಟಿಗೆ ಏನೂ ಇಲ್ಲದ ಹಾಗೆ ತೋರುತ್ತದಲ್ಲವೋ?

[4] ಆದರೂ ಈಗ ಯೆಹೋವ ದೇವರು ಹೀಗೆ ಹೇಳಿದರು: ‘ಜೆರುಬ್ಬಾಬೆಲನೇ, ಬಲವಾಗಿರು. ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನೇ, ಬಲವಾಗಿರು. ದೇಶದ ಜನರೆಲ್ಲರೇ, ಬಲವಾಗಿರಿ,’ ಕೆಲಸಮಾಡಿರಿ. ‘ನಾನು ನಿಮ್ಮ ಸಂಗಡ ಇದ್ದೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

[5] ನೀವು ಈಜಿಪ್ಟಿನೊಳಗಿನಿಂದ ಹೊರಗೆ ಬಂದಾಗ, ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ, ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿರುವುದು. ನೀವು ಭಯಪಡಬೇಡಿರಿ.

[6] “ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಸ್ವಲ್ಪ ಕಾಲದ ನಂತರ ಇನ್ನೊಂದು ಸಾರಿ ನಾನು ಆಕಾಶಗಳನ್ನು ಭೂಮಿಯನ್ನು, ಸಮುದ್ರವನ್ನು ಮತ್ತು ಒಣನೆಲವನ್ನು ಕದಲಿಸುತ್ತೇನೆ.

[7] ಎಲ್ಲಾ ಜನಾಂಗಗಳನ್ನು ನಡುಗಿಸುವೆನು. ಎಲ್ಲಾ ಜನಾಂಗಗಳ ಇಷ್ಟ ವಸ್ತುಗಳು ಬಂದು ಒದಗಲು, ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

[8] ‘ಬೆಳ್ಳಿ ನನ್ನದು, ಚಿನ್ನವು ನನ್ನದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

[9] ‘ಈಗಿರುವ ಆಲಯದ ಮಹಿಮೆಯು, ಹಿಂದಿನ ಆಲಯದ ಮಹಿಮೆಗಿಂತ ವಿಶೇಷವಾಗಿರುವುದು,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. ‘ನಾನೇ ಈ ಸ್ಥಳದಲ್ಲಿ ಸಮಾಧಾನ ಕೊಡುವೆನು,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.”

[10] ದಾರ್ಯಾವೆಷನ ಎರಡನೆಯ ವರ್ಷದ, ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನಿಗೆ ಬಂದಿತು:

[11] “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮೋಶೆಯ ನಿಯಮದ ಪ್ರಕಾರವಾಗಿ ಯಾಜಕರಿಗೆ,

[12] ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪ್ರತಿಷ್ಠಿಸಿದ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾದರೂ ಎಣ್ಣೆಯನ್ನಾದರೂ ಯಾವ ವಿಧವಾದ ಆಹಾರವನ್ನಾದರೂ ಮುಟ್ಟಿದರೆ, ಅದು ಪರಿಶುದ್ಧವಾಗುವುದೋ? ಕೇಳು,’ ” ಎಂದನು. ಹಗ್ಗಾಯನು ಹಾಗೆ ವಿಚಾರಿಸಲು, ಯಾಜಕರು, “ಇಲ್ಲ,” ಎಂದು ಉತ್ತರಕೊಟ್ಟರು.

[13] ಆಗ ಹಗ್ಗಾಯನು, “ಹೆಣದಿಂದ ಅಶುದ್ಧವಾದವನು, ಇವುಗಳಲ್ಲಿ ಯಾವುದನ್ನಾದರೂ ಮುಟ್ಟಿದರೆ, ಅಶುದ್ಧವಾಗುವುದೋ?” ಎಂದನು. ಯಾಜಕರು ಉತ್ತರವಾಗಿ, “ಹೌದು, ಅಶುದ್ಧವಾಗುವುದು,” ಎಂದರು.

[14] ಆಗ ಹಗ್ಗಾಯನು ಮುಂದುವರಿಸಿ ಹೇಳಿದ್ದೇನೆಂದರೆ, “ಈ ಜನರೂ, ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಅರ್ಪಿಸುವಂಥಾದ್ದು ಅಶುದ್ಧವೇ.

[15] “ಈಗ ಚೆನ್ನಾಗಿ ಯೋಚಿಸಿಕೊಳ್ಳಿರಿ. ಯೆಹೋವ ದೇವರ ಆಲಯ ನಿವೇಶನದಲ್ಲಿ, ಕಲ್ಲಿನ ಮೇಲೆ ಕಲ್ಲು ಇಡುವ, ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ.

[16] ಆ ದಿನಗಳು ಇದ್ದದ್ದು ಮೊದಲುಗೊಂಡು, ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ, ಹತ್ತು ಸೇರು ಮಾತ್ರ ಸಿಕ್ಕುತ್ತಿತ್ತು. ಒಬ್ಬನು ಐವತ್ತು ಪಾತ್ರೆ ದ್ರಾಕ್ಷಾರಸವನ್ನು ತುಂಬಿಸುವುದಕ್ಕೆ ತೊಟ್ಟಿಗೆ ಬಂದಾಗ, ಇಪ್ಪತ್ತು ಮಾತ್ರ ದೊರೆಯುತ್ತಿತ್ತಷ್ಟೆ.

[17] ನಾನು ನಿಮ್ಮ ಕೈ ದುಡಿತಗಳನ್ನೆಲ್ಲಾ ಬೂಜಿನಿಂದಲೂ ಉರಿಗಾಳಿಯಿಂದಲೂ ಕಲ್ಮಳೆಯಿಂದಲೂ ಹಾಳುಮಾಡಿದೆನು. ಆದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ.

[18] ಚೆನ್ನಾಗಿ ನೆನಪಿಗೆ ತಂದುಕೊಳ್ಳಿರಿ. ಇಂದಿನಿಂದ ಇದಕ್ಕೆ ಮುಂಚೆ ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ, ಯೆಹೋವ ದೇವರ ಮಂದಿರದ ಅಸ್ತಿವಾರವು ಹಾಕಲಾದ ದಿನದಿಂದ ಸೂಕ್ಷ್ಮವಾಗಿ ಯೋಚಿಸಿಕೊಳ್ಳಿರಿ.

[19] ಬೀಜವು ಇನ್ನು ಕಣಜದಲ್ಲಿ ಉಂಟೋ? ದ್ರಾಕ್ಷಿ, ಅಂಜೂರ, ದಾಳಿಂಬೆ, ಎಣ್ಣೆಮರಗಳು ಇನ್ನೂ ಫಲಿಸಲಿಲ್ಲವಲ್ಲಾ. “ಈ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು,” ಎಂದರು.

[20] ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು, ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ, ಹಗ್ಗಾಯನಿಗೆ ಬಂದಿತು.

[21] ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನೆಂದರೆ, “ನಾನು ಆಕಾಶಗಳನ್ನೂ, ಭೂಮಿಯನ್ನೂ ಕದಲಿಸುವೆನು.

[22] ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು. ನಾನು ಇತರ ಜನಾಂಗಗಳ, ರಾಜ್ಯಗಳ ಬಲವನ್ನು ನಾಶಮಾಡುವೆನು. ರಥಗಳನ್ನೂ, ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು. ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಖಡ್ಗದಿಂದ ಬೀಳುವನು.

[23] “ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಶೆಯಲ್ತಿಯೇಲನ ಮಗನಾದ ನನ್ನ ಸೇವಕ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ನಿನ್ನನ್ನು ಮುದ್ರೆಯ ಉಂಗುರದ ಹಾಗೆ ಇಡುವೆನು. ಏಕೆಂದರೆ ನಿನ್ನನ್ನು ನಾನೇ ಆಯ್ದುಕೊಂಡಿದ್ದೇನೆ,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.”

ಹಗ್ಗಾಯ — Chapters