[1] ಮೇದ್ಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅವರಿಗೆ ಸಹಾಯಮಾಡಿ, ಅವನನ್ನು ರಕ್ಷಿಸಲು ನಾನು ನಿಂತುಕೊಂಡೆನು.
[2] ನಾನು ಈಗ ಸತ್ಯವನ್ನು ತಿಳಿಸುತ್ತೇನೆ. ಪಾರಸಿಯ ದೇಶದಲ್ಲಿ ಇನ್ನೂ ಮೂರು ಅರಸರು ಏಳುವರು. ನಾಲ್ಕನೆಯವನು ಅವರೆಲ್ಲರಿಗಿಂತಲೂ ಬಹಳ ಐಶ್ವರ್ಯವಂತನಾಗಿರುವನು. ಅವನು ತನ್ನ ಐಶ್ವರ್ಯದಿಂದಾಗುವ ಸಾಮರ್ಥ್ಯದಿಂದ ಗ್ರೀಕ್ ರಾಜ್ಯಕ್ಕೆ ವಿರೋಧವಾಗಿ ಎಲ್ಲರನ್ನೂ ಹುರಿದುಂಬಿಸುವನು.
[3] ಆಗ ಬಲವುಳ್ಳ ಒಬ್ಬ ಅರಸನು ಉದಯಿಸುವನು. ಅವನು ಮಹಾಅಧಿಕಾರದಿಂದ ಆಳುವನು ಮತ್ತು ತನ್ನ ಇಷ್ಟದ ಪ್ರಕಾರ ಮಾಡುವನು.
[4] ಅವನು ಉದಯಿಸಿದ ನಂತರ, ಅವನ ರಾಜ್ಯ ಒಡೆದು ಆಕಾಶದ ನಾಲ್ಕು ದಿಕ್ಕುಗಳಿಗೂ ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಅದು ಇನ್ನು ಪ್ರಬಲವಾಗದು. ಏಕೆಂದರೆ ಅವನ ರಾಜ್ಯವನ್ನು ಅವನಿಂದ ಕಿತ್ತುಕೊಂಡು ಇತರರಿಗೆ ನೀಡಲಾಗುವುದು.
[5] ದಕ್ಷಿಣದ ಅರಸನು ಬಲಿಷ್ಠನಾಗುವನು. ಆದರೆ ಅವನ ಸೇನಾಪತಿಗಳಲ್ಲಿ ಒಬ್ಬನು ಅವನಿಗಿಂತ ಬಲಿಷ್ಠನಾಗುವನು ಮತ್ತು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವುದು.
[6] ಕೆಲವು ವರ್ಷಗಳ ನಂತರ ಅವರಿಬ್ಬರು ಒಪ್ಪಂದ ಮಾಡಿಕೊಳ್ಳುವರು. ದಕ್ಷಿಣದ ಅರಸನ ಮಗಳು ಒಪ್ಪಂದ ಮಾಡಿಕೊಳ್ಳಲು ಉತ್ತರದ ಅರಸನ ಬಳಿಗೆ ಬರುವಳು. ಆದರೆ ಅವಳು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಿಲ್ಲ. ಅವನೂ, ಅವನ ಅಧಿಕಾರವೂ ನಿಲ್ಲುವುದಿಲ್ಲ. ಆ ದಿನಗಳಲ್ಲಿ ಅವಳೂ ಅವಳನ್ನು ಕರೆತಂದವರೂ ಮತ್ತು ಅವಳ ತಂದೆಯೂ ಅವಳಿಗೆ ಸಹಾಯ ಮಾಡಿದವರು ಯಾರೂ ಉಳಿಯುವುದಿಲ್ಲ.
[7] ಅವಳ ವಂಶದಲ್ಲಿಯ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು, ಸೈನ್ಯದೊಂದಿಗೆ ಬಂದು, ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ, ಅವರ ವಿರುದ್ಧ ಹೋರಾಡಿ ಗೆಲ್ಲುವನು.
[8] ಅವರ ದೇವರುಗಳನ್ನೂ, ಅವರ ವಿಗ್ರಹಗಳನ್ನೂ ಅವರ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನೂ ಅವನು ಸೂರೆಮಾಡಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋಗುವನು. ಕೆಲವು ವರ್ಷಗಳವರೆಗೆ ಅವನು ಉತ್ತರದ ಅರಸನ ಮೇಲೆ ಬಿಟ್ಟುಬಿಡುವನು.
[9] ಆಮೇಲೆ ಉತ್ತರದ ಅರಸನು, ದಕ್ಷಿಣದ ಅರಸನ ಮೇಲೆ ಯುದ್ಧಕ್ಕೆ ಬರುವನು. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗಿ ಹೋಗುವನು.
[10] ಅವನ ಮಕ್ಕಳು ಯುದ್ಧಕ್ಕೆ ಸಿದ್ಧರಾಗಿ ದೊಡ್ಡ ಸೈನ್ಯ ಕೂಡಿಸುವರು. ಆ ಸೈನ್ಯವು ನಿಬಂಧಿಸಲಾಗದ ಪ್ರವಾಹದಂತೆ ಹರಿದುಬಂದು, ಯುದ್ಧವನ್ನು ಅವನ ಕೋಟೆಯವರೆಗೆ ನಡೆಸುವರು.
[11] ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಮಹಾ ಸೈನ್ಯವನ್ನು ಕೂಡಿಸಿದನು. ಉತ್ತರದ ಅರಸನ ಸಂಗಡ ಯುದ್ಧಮಾಡುವನು. ಆದರೆ ಆ ಮಹಾ ಸೈನ್ಯವು ದಕ್ಷಿಣ ಅರಸನ ಕೈವಶವಾಗುವುದು.
[12] ಆ ಮಹಾ ಸೈನ್ಯವನ್ನು ಅವನು ತೆಗೆದುಹಾಕಿದ ಮೇಲೆ, ಅವನ ಹೃದಯವು ಹೆಚ್ಚಳ ಪಡುವುದು. ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ, ಪ್ರಾಬಲ್ಯಕ್ಕೆ ಬರುವುದಿಲ್ಲ.
[13] ಏಕೆಂದರೆ ಉತ್ತರದ ಅರಸನು ಪುನಃ ತಿರುಗಿಕೊಂಡು ಮೊದಲನೆಯದಕ್ಕಿಂತಲೂ ದೊಡ್ಡ ಸೈನ್ಯವನ್ನು ನಿಲ್ಲಿಸಿ, ಕೆಲವು ವರ್ಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ, ಬಹಳ ಆಯುಧಗಳ ಸಂಗಡವೂ ನಿಶ್ಚಯವಾಗಿ ಬರುವನು.
[14] ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು. ನಿನ್ನ ಜನರಲ್ಲಿ ಹಿಂಸಾಕಾರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಿರುಗಿ ಬೀಳುವರು. ಆದರೆ ಸೋತುಹೋಗುವರು.
[15] ಆಗ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ, ದಿಬ್ಬವನ್ನು ಕೆಡವಿ, ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವನು. ದಕ್ಷಿಣದ ಭುಜಬಲವಾದರೂ ಅವನು ಆಯ್ದುಕೊಂಡ ಜನರಾದರೂ ಎದುರಿಸಿ ನಿಲ್ಲುವುದಕ್ಕೆ ಅಶಕ್ತರಾಗುವರು.
[16] ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು. ಯಾರೂ ಅವನ ಮುಂದೆ ನಿಲ್ಲಲಾರರು. ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದನ್ನು ನಾಶಮಾಡುವ ಅಧಿಕಾರ ಹೊಂದಿರುವನು.
[17] ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ದಕ್ಷಿಣದ ರಾಜನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವನು. ಅವನ ರಾಜ್ಯವನ್ನು ಉರುಳಿಸಲು ಅವನಿಗೆ ಮಗಳನ್ನು ಕೊಡುವನು. ಆದರೆ ಅವನ ಯೋಜನೆಗಳು ಜಯಹೊಂದುವುದಿಲ್ಲ. ಇಲ್ಲವೆ ಅವನಿಗೆ ಸಹಾಯ ಮಾಡುವುದಿಲ್ಲ.
[18] ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ, ಅನೇಕರನ್ನು ವಶಪಡಿಸಿಕೊಳ್ಳುವನು. ಆದರೆ ಒಬ್ಬ ಅಧಿಪತಿಯು ಅವನ ಅಹಂಕಾರವನ್ನು ಅಡಗಿಸಿಬಿಡುವನು. ಆ ಅಹಂಕಾರವನ್ನು ತನ್ನ ಮೇಲೆ ಹಾಕಿಕೊಳ್ಳದೆ, ಅವನ ಮೇಲೆ ತಿರುಗಿಸಿ ಬಿಡುವನು.
[19] ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು. ಆದರೆ ಅವನು ಎಡವಿಬಿದ್ದು, ಕಾಣದೆ ಹೋಗುವನು.
[20] ಅವನ ಉತ್ತರಾಧಿಕಾರಿಯು ಅರಸೊತ್ತಿಗೆಯ ಸೊಗಸನ್ನು ಕಾದುಕೊಳ್ಳುವುದಕ್ಕಾಗಿ ಸುಂಕ ವಸೂಲಿ ಮಾಡುವವನನ್ನು ಕಳುಹಿಸುವನು. ಆದರೂ ಕೆಲವೇ ವರ್ಷಗಳಲ್ಲಿ ಅವನು ನಾಶ ಹೊಂದುವನು. ಇದು ಕೋಪದಿಂದಾಗಲಿ ಇಲ್ಲವೆ ಯುದ್ಧದಿಂದಾಗಲಿ ಆಗುವುದಿಲ್ಲ.
[21] ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು. ಅವನಿಗೆ ರಾಜಮರ್ಯಾದೆಯನ್ನು ಕೊಡುವುದಿಲ್ಲ. ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.
[22] ಪ್ರವಾಹದಂತಿರುವ ಆ ಸೈನ್ಯವೂ, ಒಡಂಬಡಿಕೆಯ ರಾಜಕುಮಾರನೂ ಅವನ ರಭಸಕ್ಕೆ ಸಿಕ್ಕಿ ಒಡೆದುಹೋಗಿ ನಾಶವಾಗುವರು.
[23] ಅವನ ಸಂಗಡ ಒಪ್ಪಂದ ಮಾಡಿಕೊಂಡ ಮೇಲೆ ಕಪಟವಾಗಿ ನಡೆಯುವನು. ಕೆಲವು ಜನರ ಸಹಾಯದಿಂದ ಅಧಿಕಾರ ಪಡೆಯುವನು.
[24] ನೆಮ್ಮದಿಯ ಕಾಲದಲ್ಲಿ ಸಂಸ್ಥಾನಗಳ ಫಲವತ್ತಾದ ಪ್ರದೇಶಗಳಲ್ಲಿ ನುಗ್ಗಿ, ತಂದೆ ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು. ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು, ತನ್ನನ್ನು ಅವರಿಗೆ ಹಂಚುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.
[25] ಅವನು ದಕ್ಷಿಣದ ಅರಸನಿಗೆ ವಿರೋಧವಾಗಿ ತನ್ನ ಶಕ್ತಿಯಿಂದಲೂ ಧೈರ್ಯದಿಂದಲೂ ದೊಡ್ಡ ಸೈನ್ಯದ ಸಂಗಡ ಯುದ್ಧಕ್ಕೆ ಸನ್ನದ್ಧನಾಗುವನು, ಆದರೆ ನಿಲ್ಲಲಾರದೆ ಹೋಗುವನು. ಏಕೆಂದರೆ ಅವನಿಗೆ ವಿರೋಧವಾಗಿ ಕುಯುಕ್ತಿಗಳನ್ನು ಕಲ್ಪಿಸುವರು.
[26] ಅವನ ರಾಜ ಭೋಜನದಲ್ಲಿ ಭಾಗವನ್ನು ತಿಂದವರೇ, ಅವನನ್ನು ನಾಶಮಾಡುವರು. ಅವನ ಸೈನ್ಯವು ತುಂಬಿ ತುಳುಕುವುದು ಮತ್ತು ಅನೇಕರು ಹತರಾಗುವರು.
[27] ಈ ಇಬ್ಬರ ಅರಸನ ಹೃದಯಗಳು ಕೇಡನ್ನು ಮಾಡುವಂತವುಗಳಾಗಿರುವುವು. ಒಂದೇ ಮೇಜಿನಲ್ಲಿ ಕುಳಿತು ಒಬ್ಬರಿಗೊಬ್ಬರು ಸುಳ್ಳು ಹೇಳುವರು. ಆದರೆ ಅದು ಅನುಕೂಲವಾಗದು. ಏಕೆಂದರೆ ಅದು ಹೇಗಾದರೂ ನಿಶ್ಚಿತ ಕಾಲದಲ್ಲಿಯೇ ಅಂತ್ಯವಾಗುವುದು.
[28] ಆಗ ಉತ್ತರದ ಅರಸನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂದಿರುಗುವನು, ಆದರೆ ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವುದು; ಅವನು ಇದಕ್ಕೆ ವಿರುದ್ಧವಾಗಿ ಕಾರ್ಯಸಾಧಿಸಿ, ಸ್ವಂತ ದೇಶಕ್ಕೆ ಹಿಂದಿರುಗುವನು.
[29] ನೇಮಕವಾದ ಕಾಲದಲ್ಲಿಯೇ ಅವನು ಹಿಂದಿರುಗಿ ದಕ್ಷಿಣಕ್ಕೆ ಬರುವನು, ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವುದಿಲ್ಲ.
[30] ಏಕೆಂದರೆ ಕಿತ್ತೀಮಿನ ಹಡಗುಗಳು ಅವನಿಗೆ ವಿರೋಧವಾಗಿ ಬರುವುವು. ಆದ್ದರಿಂದ ಅವನು ಎದೆಗುಂದಿ, ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿ ಕೋಪಿಸಿಕೊಳ್ಳುವನು. ಹಿಂದಿರುಗಿ ಬಂದು ಪರಿಶುದ್ಧ ಒಡಂಬಡಿಕೆಯನ್ನು ತೊರೆದವರಿಗೆ ದಯೆ ತೋರಿಸುವನು.
[31] ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲಸುಮಾಡಿ, ನಿತ್ಯ ಯಜ್ಞವನ್ನು ನಿಲ್ಲಿಸುವುದು. ಹಾಳುಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವುದು.
[32] ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆಯುವವರನ್ನು ನಯವಾದ ಮಾತುಗಳಿಂದ ಕೆಡಿಸುವನು, ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಎದುರಿಸುವರು.
[33] ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದರೂ ಖಡ್ಗದಿಂದಲೂ ಬೆಂಕಿಯಿಂದಲೂ ಸೆರೆಯಿಂದಲೂ ಕೊಳ್ಳೆಯಿಂದಲೂ ಕೆಲಕಾಲ ಸಿಕ್ಕಿ ಬೀಳುವರು.
[34] ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವುದು, ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಸೇರಿಕೊಳ್ಳುವರು.
[35] ಇದಲ್ಲದೆ ಅಂತ್ಯಕಾಲದವರೆಗೆ ಜ್ಞಾನಿಗಳನ್ನು ಶೋಧಿಸುವುದಕ್ಕೂ ಅದರಲ್ಲಿ ಅನೇಕರು ಬೀಳುವರು; ಏಕೆಂದರೆ ಇದು ನೇಮಕವಾದ ಸಮಯದಲ್ಲಿ ಬರುವುದು.
[36] ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು. ತನ್ನನ್ನು ತಾನೇ ಹೆಚ್ಚಿಸಿಕೊಂಡು, ತನ್ನನ್ನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನನ್ನಾಗಿ ಮಾಡಿಕೊಂಡು, ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ, ರೋಷವು ತೀರುವವರೆಗೂ ವೃದ್ಧಿಯಾಗಿರುವನು. ಹೀಗೆ ನಿಶ್ಚಯವಾದದ್ದು ನೆರವೇರಲೇಬೇಕು.
[37] ಅವನು ತನ್ನ ಪಿತೃಗಳ ದೇವರನ್ನಾಗಲೀ, ಸ್ತ್ರೀಯರಿಂದ ಅಪೇಕ್ಷಿಸಿದವರನ್ನಾಗಲೀ ಅವನು ಲಕ್ಷಿಸುವುದಿಲ್ಲ, ಯಾವ ದೇವರನ್ನೂ ಲಕ್ಷಿಸುವುದಿಲ್ಲ; ಆದರೆ ಅವನು ಎಲ್ಲವುಗಳಿಗಿಂತ ಹೆಚ್ಚಿ, ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
[38] ಅವನು ಕುಲ ದೇವರಿಗೆ ಬದಲಾಗಿ, ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿ ಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.
[39] ಅವನು ಅನ್ಯ ದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ತನಗೆ ಮೆಚ್ಚುಗೆಯಾದವರನ್ನು ಹೆಚ್ಚಾಗಿ ಸತ್ಕರಿಸುವನು. ಅವರನ್ನು ಬಹುಜನರ ಮೇಲೆ ಅಧಿಕಾರಿಗಳನ್ನಾಗಿ ನೇಮಿಸುವನು. ಹಣಕ್ಕಾಗಿ ದೇಶವನ್ನೇ ಹಂಚಿಬಿಡುವನು.
[40] ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂದಿಗೂ, ಸವಾರರೊಂದಿಗೂ, ಅನೇಕ ಹಡಗುಗಳೊಂದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದುಹೋಗುವನು.
[41] ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳನ್ನು ನಾಶಮಾಡುವನು; ಆದರೆ ಎದೋಮು, ಮೋವಾಬು ಮತ್ತು ಅಮ್ಮೋನಿಯರಲ್ಲಿ ಮುಖ್ಯಸ್ಥರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.
[42] ಅವನು ಇತರ ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಈಜಿಪ್ಟ್ ದೇಶವು ತಪ್ಪಿಸಿಕೊಳ್ಳದು.
[43] ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ, ಈಜಿಪ್ಟಿನ ಎಲ್ಲಾ ಅಮೂಲ್ಯ ವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವುದು. ಲಿಬಿಯದವರೂ ಕೂಷ್ಯರೂ ಅವನಿಗೆ ಅಧೀನರಾಗುವರು.
[44] ಆದರೆ ಪೂರ್ವದಿಂದಲೂ, ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವುವು. ಆದ್ದರಿಂದ ಅವನು ಮಹಾ ಉಗ್ರವಾಗಿ ಅನೇಕರನ್ನು ಸಂಹರಿಸುವುದಕ್ಕೂ, ನಿರ್ಮೂಲ ಮಾಡುವುದಕ್ಕೂ ಹೊರಡುವನು.
[45] ಅವನು ತನ್ನ ರಾಜ ಗುಡಾರಗಳನ್ನು ಸಮುದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು. ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.