[1] ಯೆಹೋವ ದೇವರು ಹೀಗೆ ಹೇಳುತ್ತಾನೆ: “ಮೋವಾಬಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಎದೋಮಿನ ಅರಸನ ಎಲುಬುಗಳನ್ನು, ಸುಟ್ಟು ಸುಣ್ಣ ಮಾಡಿದ್ದಾನೆ.
[2] ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಕೆರೀಯೋತಿನ ಕೋಟೆಗಳನ್ನು ದಹಿಸಿಬಿಡುವುದು. ಮೋವಾಬು ಆರ್ಭಟದ ಮತ್ತು ತುತೂರಿಯ ಧ್ವನಿಯ ಸಂಗಡ ಗಲಿಬಿಲಿಯಲ್ಲಿ ಸಾಯುವುದು.
[3] ನಾನು ಅದರ ಮಧ್ಯದಿಂದ ನ್ಯಾಯಾಧಿಪತಿಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
[4] ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದದವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಯೆಹೋವ ದೇವರ ನಿಯಮವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳು ದೇವರುಗಳೇ, ಇವರನ್ನು ದಾರಿ ತಪ್ಪುವವರನ್ನಾಗಿ ಮಾಡಿವೆ.
[5] ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.”
[6] ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ನಿರಪರಾಧಿಗಳನ್ನು ಬೆಳ್ಳಿಗೆ ಮತ್ತು ಬಡವರನ್ನು ಒಂದು ಜೋಡಿ ಕೆರಗಳಿಗೆ ಮಾರಿದರು.
[7] ಬಡವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು, ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ.
[8] ಅವರು ಅಡವು ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ. ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿಯುತ್ತಾರೆ.
[9] “ಆದರೂ ನನ್ನ ಜನರೇ, ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ, ಅಮೋರಿಯರನ್ನು ನಾನು ನಾಶ ಪಡಿಸಿದೆನು. ನಾನು ಮೇಲೆ ಅದರ ಫಲವನ್ನು ಮತ್ತು ಕೆಳಗೆ ಅದರ ಬೇರನ್ನು ಕಿತ್ತು ಹಾಕುವಂತೆ, ಅವರನ್ನು ನಿರ್ಮೂಲ ಮಾಡುವೆನು.
[10] ನಾನೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆತಂದೆನು. ಅಮೋರಿಯರ ದೇಶವನ್ನು ನಿಮಗೆ ಸೊತ್ತಾಗಿ ಕೊಡಲು, ನಿಮ್ಮನ್ನು ನಾಲ್ವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದೆನು.
[11] “ನಾನು ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸರಿಯಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.
[12] “ಆದರೆ ನೀವು ನಾಜೀರರಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟಿರಿ. ಪ್ರವಾದಿಗಳಿಗೆ ಪ್ರವಾದಿಸಬೇಡಿರಿ ಎಂದು ಆಜ್ಞಾಪಿಸಿದಿರಿ.
[13] “ಇಗೋ, ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ, ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
[14] ಆದ್ದರಿಂದ ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು. ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
[15] ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲನು. ಪಾದತ್ವರಿತನು ತಪ್ಪಿಸಿಕೊಳ್ಳನು. ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
[16] ಶೂರರಲ್ಲಿ ಧೈರ್ಯ ಹೃದಯವುಳ್ಳವನು, ಆ ದಿನದಲ್ಲಿ ಬೆತ್ತಲೆಯಾಗಿ ಓಡಿಹೋಗುವನು,” ಎಂದು ಯೆಹೋವ ದೇವರು ಹೇಳುತ್ತಾರೆ.