Skip to content
Opens in a new window
Listen to this chapter • 4:22

[1] ದೇವರ ಮುಂದೆಯೂ ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸಲು ಕರ್ತ ಆಗಿರುವ ಕ್ರಿಸ್ತ ಯೇಸುವಿನ ಮುಂದೆಯೂ ಅವರ ಪ್ರತ್ಯಕ್ಷತೆ ಹಾಗೂ ಅವರ ರಾಜ್ಯದ ಮುಂದೆಯೂ ನಾನು ನಿನಗೆ ಆಜ್ಞಾಪಿಸಿ ಹೇಳುವುದೇನೆಂದರೆ:

[2] ವಾಕ್ಯವನ್ನು ಸಾರು; ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಸಿದ್ಧವಾಗಿರು. ಎಲ್ಲಾ ತಾಳ್ಮೆಯಿಂದ ಉಪದೇಶಿಸಿ ಖಂಡಿಸು, ಗದರಿಸು, ಪ್ರೋತ್ಸಾಹಿಸು.

[3] ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ. ಆದರೆ ಅವರು ತಮ್ಮ ಕಿವಿಗಳು ಕೇಳಲು ಆಶೆಪಡುವ ಅನೇಕ ಉಪದೇಶಕರನ್ನು ಕೂಡಿಟ್ಟುಕೊಳ್ಳುವರು.

[4] ಅವರು ಸತ್ಯಕ್ಕೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ತಿರುಗಿಕೊಳ್ಳುವರು.

[5] ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು. ಶ್ರಮೆಗಳನ್ನು ತಾಳಿಕೋ. ಸುವಾರ್ತಿಕನ ಕೆಲಸವನ್ನು ಮಾಡು. ನಿನ್ನ ಸೇವೆಯ ಎಲ್ಲಾ ಕರ್ತವ್ಯಗಳನ್ನು ನೆರವೇರಿಸು.

[6] ಏಕೆಂದರೆ ನಾನು ಈಗಲೇ ಪಾನ ಅರ್ಪಣೆಯಾಗಿ ಇದ್ದೇನೆ. ನಾನು ಹೊರಟುಹೋಗಬೇಕಾದ ಸಮಯವು ಹತ್ತಿರ ಬಂದಿದೆ.

[7] ನಾನು ಒಳ್ಳೆಯ ಹೋರಾಟವನ್ನು ಮಾಡಿದ್ದೇನೆ. ನಾನು ಓಟವನ್ನು ಮುಗಿಸಿದ್ದೇನೆ. ನಾನು ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.

[8] ಈಗ ನನಗೋಸ್ಕರ ನೀತಿಯ ಕಿರೀಟವು ಇಡಲಾಗಿದೆ. ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾದ ಕರ್ತದೇವರು ಆ ದಿನದಲ್ಲಿ ನನಗೆ ಕೊಡುವರು. ನನಗೆ ಮಾತ್ರವಲ್ಲದೆ ಅವರ ಪುನರಾಗಮನಕ್ಕಾಗಿ ಆಸಕ್ತಿಯಿಂದ ಕಾದಿರುವವರೆಲ್ಲರಿಗೂ ಕೊಡುವರು.

[9] ನನ್ನ ಬಳಿಗೆ ಆದಷ್ಟು ಬೇಗನೆ ಬರುವುದಕ್ಕೆ ನೀನು ಪ್ರಯತ್ನ ಮಾಡು.

[10] ಏಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ, ತೀತನು ದಲ್ಮಾತ್ಯಕ್ಕೂ ಹೋದನು.

[11] ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನು ನನ್ನ ಸೇವೆಗಾಗಿ ನನಗೆ ಉಪಯುಕ್ತನಾಗಿದ್ದಾನೆ.

[12] ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದೆನು.

[13] ತ್ರೋವದಲ್ಲಿ ನಾನು ಕರ್ಪನ ಬಳಿ ಬಿಟ್ಟುಬಂದ ಮೇಲಂಗಿಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.

[14] ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡು ಮಾಡಿದ್ದಾನೆ. ಕರ್ತದೇವರು ಅವನ ಕೃತ್ಯಗಳಿಗೆ ಅನುಸಾರವಾಗಿ ಅವನಿಗೆ ಪ್ರತಿಫಲವನ್ನು ಕೊಡಲಿ.

[15] ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ಏಕೆಂದರೆ ಅವನು ನಮ್ಮ ಸಂದೇಶವನ್ನು ಬಹಳವಾಗಿ ವಿರೋಧಿಸಿದನು.

[16] ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರ ಲೆಕ್ಕಕ್ಕೆ ಸೇರಿಸಲಾಗದೆ ಇರಲಿ.

[17] ಆದರೆ ಕರ್ತ ಯೇಸು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ, ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರುವಂತೆ ಮಾಡಿದರು. ಯೆಹೂದ್ಯರಲ್ಲದವರೆಲ್ಲರೂ ಸಹ ಅದನ್ನು ಕೇಳುವಂತೆಯೂ ಮಾಡಿದರು. ಇದಲ್ಲದೆ ಕರ್ತ ಯೇಸು ನನ್ನನ್ನು ಸಿಂಹದ ಬಾಯೊಳಗಿಂದ ಸಂರಕ್ಷಿಸಿದರು.

[18] ನನ್ನನ್ನು ಪ್ರತಿಯೊಂದು ದುಷ್ಟದಾಳಿಯಿಂದ ಕರ್ತ ಯೇಸು ತಪ್ಪಿಸಿ, ತಮ್ಮ ಪರಲೋಕ ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ತರುವರು. ಯುಗಯುಗಾಂತರಗಳಲ್ಲಿಯೂ ಅವರಿಗೆ ಮಹಿಮೆ. ಆಮೆನ್.

[19] ಪ್ರಿಸ್ಕಳಿಗೂ ಅಕ್ವಿಲನಿಗೂ ಒನೇಸಿಫೊರನ ಮನೆಯವರಿಗೂ ವಂದನೆ.

[20] ಎರಸ್ತನು ಕೊರಿಂಥದಲ್ಲಿ ಉಳಿದುಕೊಂಡಿದ್ದಾನೆ. ಆದರೆ ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ನಾನು ಮಿಲೇತದಲ್ಲಿ ಬಿಟ್ಟಿದ್ದೇನೆ.

[21] ನೀನು ಚಳಿಗಾಲಕ್ಕೆ ಮುಂಚೆಯೇ ಆದಷ್ಟು ಬೇಗನೆ ಬರುವುದಕ್ಕೆ ಪ್ರಯತ್ನ ಮಾಡು. ಯುಬೂಲನೂ ಪೊದೆಯನೂ ಲೀನನೂ ಕ್ಲೌದ್ಯಳೂ ಎಲ್ಲಾ ಸಹೋದರರೂ ನಿನಗೆ ವಂದನೆ ಹೇಳುತ್ತಾರೆ.

[22] ಕರ್ತ ಯೇಸು ನಿನ್ನ ಆತ್ಮದೊಂದಿಗೆ ಇರಲಿ. ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

2 ತಿಮೊಥೆಯನಿಗೆ — Chapters