
ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು.
ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ್ತಾ ಇತ್ತು. ನಮ್ಮ ಜನರೇಶನ್ನಿನವರು ಏನಿದ್ರೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದವರು, ಆದ್ದರಿಂದ ಈ ದೇಶದಲ್ಲಿ ನಾವು ನೋಡಿದ ಕಡಿಮೆ ಹಣ ಎಂದರೆ ಮೂರು ಸಾವಿರ ಡಾಲರುಗಳಷ್ಟು. ಇಲ್ಲಿ ವಿದ್ಯಾರ್ಥಿಗಳಾಗಿ, ವ್ಯಾಸಂಗ ಮತ್ತು ಸಂಶೋಧನೆ ಮಾಡಲು ಬಂದವರ ಹಾಗೆ, ನಾವೇನೂ ಗ್ಯಾಸ್ ಸ್ಟೇಶನ್‌ನಲ್ಲಾಗಲೀ, ಅಂಗಡಿಗಳಲ್ಲಾಗಲೀ ಕೆಲಸ ಮಾಡಿ, ವಾರವಿಡೀ ಬ್ರೆಡ್ ತಿಂದು, ಸೂಪ್ ಕುಡಿದು ಮಲಗಿದ್ದ ಅನುಭವವಂತೂ ನಮ್ಮ ಜನರೇಶನ್ನಿನವರಲ್ಲಿ ಆದದ್ದು ಕಡಿಮೆ ಎನ್ನಬೇಕು.
ಅದೇ ಸಮಯದಲ್ಲಿ, ಇಂಟರ್‌ನೆಟ್ಟಿನ ಮಹಿಮೆಯಿಂದ, ದೂರದ ಭಾರತ, ನಾವು ತೊರೆದು ಬಂದ ನಾಡು ಹತ್ತಿರವಾಗತೊಡಗಿತು. ಮೊದಲೆಲ್ಲ ದುಬಾರಿಯಾಗಿದ್ದ, ಇಂಟರ್‌ನ್ಯಾಶನಲ್ ಕರೆಗಳು, ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಒಂದು ನಿಮಿಷಕ್ಕೆ ಒಂದು ಡಾಲರಿನ ರೇಟಿನಿಂದ ಸೊನ್ನೆಗೆ ಇಳಿದು ಬಂದಿದೆ. ಫ಼ೋನ್ ಕರೆಗಳಿಗಿಂತ ಮುಂಚೆ ನನ್ನ ತಲೆಮಾರಿನವರಲ್ಲಿ ಕೆಲವರು, ಭಾರತಕ್ಕೆ ಅಮೇರಿಕದಿಂದ ಪತ್ರಗಳನ್ನು ಬರೆದಿದ್ದೇವೆ. ಊರಿನಲ್ಲಿ ಕೆಲವೇ ಕೆಲವು ಜನರ ಮನೆಗಳಲ್ಲಿ ಫ಼ೋನ್ ಸೌಲಭ್ಯ ಇದ್ದ ಕಾಲದಲ್ಲಿ, ನಮ್ಮ ಹತ್ತಿರದವರಿಗೆ, ಸ್ನೇಹಿತರಿಗೆ ನಾವು ಪತ್ರಗಳನ್ನು ಬರೆಯುತ್ತಿದೆವು, ಈಗೆಲ್ಲ ಸ್ನೇಲ್ ಮೇಲ್ ಅಂತಾರಲ್ಲ, ಅದೇ ಆಗ ನಮಗೆ ದೂರದ ಜನರೊಂದಿಗಿನ ಒಡನಾಟಕ್ಕೆ ಒಂದು ಕೊಂಡಿಯಾಗಿದ್ದಿತು. ತರುವಾಯ, ಅಮೇರಿಕದ ನಮ್ಮ ಮನೆ (ಅಪಾರ್ಟ್‌ಮೆಂಟ್) ಫ಼ೋನಿಗೆ, ಇಂಟರ್‌ನ್ಯಾಶನಲ್ ಕರೆ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡು, ನಂತರ ಕಾಲಿಂಗ್ ಕಾರ್ಡ್‌ನಿಂದ ಭಾರತಕ್ಕೆ ಕರೆ ಮಾಡಿ, ನಂತರ ವಾನೇಜ್ ಮೊದಲಾದ ಐ.ಪಿ. ಫ಼ೋನ್‌ಗಳ ಮುಖೇನ ಅನ್‌ಲಿಮಿಟೆಡ್ ಕರೆಗಳನ್ನು ತಿಂಗಳ ನಿಗದಿತ ಬಿಲ್‌ಗೆ ಮಾಡುವಾಗ ನಾವೆಲ್ಲ ಗೆದ್ದೆವು ಅಂದುಕೊಳ್ಳುತ್ತಿದ್ದ ಕಾಲವದು. ಅದರ ತರುವಾಯ, ಸುಮಾರು ೨೦೧೮ರ ಹೊತ್ತಿಗೆ ವಾಟ್ಸ್ಯಾಪ್ ಹಾವಳಿ ಹೆಚ್ಚಾಗಿ, ನಮ್ಮ ಎಲ್ಲ ಕರೆಗಳೂ ಸಂಪೂರ್ಣ "ಉಚಿತ" ಎನ್ನುವ ಕಾಲ ಬರುವಷ್ಟರ ಹೊತ್ತಿಗೆ ಒಂದು ಮಹತ್ತರ ಬದಲಾವಣೆ ಆಗತೊಡಗಿತು.
ನಾವು ದೂರ ಹೋದ ಹಾಗೆಲ್ಲ, ನಮಗೆ ಹತ್ತಿರವಾಗಿದ್ದವರು ದೂರವಾಗ ತೊಡಗಿದರು. ಹಳೆಯ ಬೇರುಗಳು ಕೆಲವು ಕಳಚಿಕೊಂಡು, ಕಣ್ಮರೆಯಾದವು. ಹೊಸ ಚಿಗುರುಗಳು ಹುಟ್ಟಿ ಬೆಳೆದು, ಇಡೀ ಭಾರತವೇ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಬೆಳವಣಿಗೆಯನ್ನು ಸಾಧಿಸತೊಡಗಿತು. ಒಂದು ಕಾಲದಲ್ಲಿ ಎಷ್ಟು ಕರೆಮಾಡಿದರೂ ತೀರದಿದ್ದ ದಾಹ, ಮುಂದೆ ಎಷ್ಟು ಬೇಕಾದರೂ ಕರೆ ಮಾಡಬಹುದು ಎನ್ನುವಷ್ಟರಲ್ಲಿ, ಆ ದಾಹವೇ ಇರದ ಹಾಗಾಗಿದ್ದನ್ನು ಸ್ವಯಂ ಅನುಭವಿಸಿದ ತಲೆಮಾರು ನಮ್ಮದು. ಒಂದು ರೀತಿ, ಹಲ್ಲು-ಕಡಲೆಯ ಸಂಬಂಧದ ಹಾಗೆ.
***
ಪೌರತ್ವ ಅಥವಾ ಸಿಟಿಜ಼ೆನ್‌ಶಿಪ್ ಅನ್ನೋದು, ನನ್ನ ಪ್ರಕಾರ ಒಂದು ಪಾಸ್‌ಪೋರ್ಟ್ ಬದಲಾಯಿಸಿದಷ್ಟು ಸರಳವಾದದ್ದಲ್ಲ. ಅದರ ಹಿಂದೆ, ಕೇವಲ ಪ್ರಾಕ್ಟಿಕಲ್ ಡಿಸಿಷನ್‌ಗಳು ಮಾತ್ರವಲ್ಲದೇ, ಅನೇಕ ಭಾವನಾತ್ಮಕ ಸಂಬಂಧಗಳೂ ಹಲವಿರುತ್ತವೆ. ನಾವು ಅಮೇರಿಕಕ್ಕೆ ಯಾವುದೇ ದಾರುಣ ಸ್ಥಿತಿಯ ಹಿನ್ನೆಲೆಯಿಂದ ಬಂದವರಲ್ಲ - ನಾವು ಸೈದ್ಧಾಂತಿಕವಾಗಿ ಮುನ್ನಲೆಯಲ್ಲಿದ್ದಾಗಲೇ, ಒಂದು ಕರ್ತವ್ಯ ನಿಮಿತ್ತ ಇಲ್ಲಿಗೆ ಬಂದು, ಇಂದೂ ಸಹ ಆ ಕರ್ಮಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹಾಗಿರುವಾಗ, ಯಾವುದು "ಸ್ವ"ದೇಶ, ಯಾವುದು "ವಿ"ದೇಶ ಎಂದು ಯೋಚಿಸಬೇಕಾದುದು ಗಮನಾರ್ಹ.
ಈ ಅಮೇರಿಕದ ಹಿರಿಮೆಯೇ ಅಂತದು - ಇದೊಂದು ಕನಸುಗಾರರ ದೇಶ, ಇಲ್ಲಿ ಅವಕಾಶಗಳು ವಿಪುಲ, ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೂ ಇಲ್ಲಿ ನ್ಯಾಯ, ನಿಷ್ಠೆ, ಕರ್ತವ್ಯಪರತೆ, ಸ್ವಾಂತಂತ್ರ್ಯ, ಹಾಗೂ ನ್ಯಾಯ ಎಲ್ಲವೂ ಒಂದು ಪಾಲು ಹೆಚ್ಚೇ. ಯಾವುದೇ ಸರ್ಕಾರವಿರಲಿ, ಯಾರೇ ಆಡಳಿತಕ್ಕೆ ಬರಲಿ, ಈ ದೇಶದ ಸಂವಿಧಾನಕ್ಕೆ ಎಲ್ಲರೂ ತಲೆ ತಗ್ಗಿಸಲೇ ಬೇಕು, ಮತ್ತು ಎಲ್ಲರೂ ಸಮಾನರು.
ಆದ್ದರಿಂದ, ಅಮೇರಿಕಕ್ಕೆ ಬಂದ ನಮಗೂ ಹಾಗೂ ಉಳಿದ ದೇಶಗಳಿಗೆ ಹೋದ ಅನಿವಾಸಿ ಭಾರತೀಯರಿಗೂ ಬಹಳಷ್ಟು ವ್ಯತ್ಯಾಸವಿದೆ. ಒಂದೇ ಮಾತಿನಲ್ಲಿ ಹೇಳೋದಾದರೆ, ಇದೇ ಸಂಬಳ-ಸವಲತ್ತುಗಳನ್ನು ಬೇರೆ ಯಾವುದೇ ದೇಶದವರು ಅವರ ಪೌರತ್ವದ ಜೊತೆಗೆ ಉಚಿತವಾಗಿ ಕೊಟ್ಟರೂ ನಾವು ಖಂಡಿತ ಅಲ್ಲಿಗೆ ಹೋಗೋದಿಲ್ಲ!
ಈಗ ಹೇಳಿ, ಯಾವುದು ಪರಕೀಯ, ಯಾವುದು ವಿದೇಶ - ನಾವು ತೂಗುತ್ತಿರುವ ತಕ್ಕಡಿಯಲ್ಲಿ ನಮ್ಮ ಅಮೇರಿಕನ್ ಮೌಲ್ಯಗಳು, ಇಲ್ಲಿನ ಜನ, ನಾಡು-ನುಡಿ, ಸಂಸ್ಕೃತಿ, ಒಡನಾಟಗಳು ಎಲ್ಲವೂ ನಮ್ಮ ಅವಿಭಾಜ್ಯ ಅಂಗಗಳೇ ಆಗಿರುವಾಗ ಇದೇ "ನಮ್ಮ" ದೇಶವಾಗುತ್ತದೆ.
***